ADVERTISEMENT

ಗವಿಮಠ ತೆಪ್ಪೋತ್ಸವ, ಗಂಗಾರತಿ ಕಣ್ತುಂಬಿಕೊಂಡ ಭಕ್ತರು

ಕಣ್ಮನ ಸೆಳೆಯುತ್ತಿದೆ ವಿದ್ಯುತ್‌ ದೀಪಗಳ ಅಲಂಕಾರ, ಶೃಂಗಾರಗೊಂಡ ಗವಿಮಠ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:07 IST
Last Updated 2 ಜನವರಿ 2026, 6:07 IST
ಕೊಪ್ಪಳದ ಗವಿಮಠದ ಕೆರೆಯಲ್ಲಿ ಗುರುವಾರ ತೆಪ್ಪಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಅಧಿಕಾರಿಗಳು ನಮಸ್ಕರಿಸಿದರು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳದ ಗವಿಮಠದ ಕೆರೆಯಲ್ಲಿ ಗುರುವಾರ ತೆಪ್ಪಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಅಧಿಕಾರಿಗಳು ನಮಸ್ಕರಿಸಿದರು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ   

ಕೊಪ್ಪಳ: ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಿವಿಧ ಬಣ್ಣಗಳ ವಿದ್ಯುತ್‌ ದೀಪಗಳಿಂದ ಮಾಡಲಾಗಿದೆ.

ಹೊಸ ವರ್ಷದ ಮೊದಲ ದಿನವಾದ ಗುರುವಾರ ಜಾತ್ರೆಯ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ಲಭಿಸಿತು. ಗವಿಮಠದ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ನಡೆದ ತೆಪ್ಪೋತ್ಸವ ಹಾಗೂ ಗಂಗಾರತಿ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಗಾಯಕಿ ಬೀದರ್‌ನ ಶಿವಾನಿ ಶಿವದಾಸಸ್ವಾಮಿ ಹಾಗೂ ತಂಡದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೀಡಿದ್ದು ಜನರನ್ನು ಸಂಗೀತದ ಅಲೆಯಲ್ಲಿ ತೇಲಾಡುವಂತೆ ಮಾಡಿತು. ಕೊಪ್ಪಳದ ಉದ್ಯಮಿ ಬಸವರಾಜ ಮಲ್ಲಿಕಾರ್ಜುನ ಮಾಳಗಿ ಅವರು ಸಂಕಲ್ಪಪೂಜೆ ನೆರವೇರಿಸುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಹುಬಳ್ಳಿಯ ಶಿವಾಜ್‌ ಹಾಗೂ ತಂಡದವರಿಂದ ಗಂಗಾರತಿ ಕಾರ್ಯಕ್ರಮ ನಡೆಸಿಕೊಟ್ಟರು. ತೆಪ್ಪ ಗವಿಮಠದ ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರೆ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಗವಿಸಿಧ್ಧೇಶಗೆ ನಮೋ ನಮೋ, ಗವಿಸಿದ್ಧೇಶರರ ಸುಪ್ರಭಾತ ಹಾಗೂ ಭಕ್ತಿಗೀತೆಗಳು ಮೊಳಗಿದವು. ಗವಿಸಿದ್ಧೇಶರರನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ.  

ADVERTISEMENT

ಅಲಂಕಾರ: ಗವಿಮಠದ ಆವರಣದಲ್ಲಿ ಕೆರೆಯು ಅಕ್ಷರಶಃ ಸರೋವರದಂತೆ ಕಾಣುವ ಮಠದ ಕೆರೆಯು ನೋಡಲು ಸುಂದರ, ಮನೋಹರ. ನಿಸರ್ಗದ ಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡ ತೆಪ್ಪವು ದೈವದ ತೊಟ್ಟಿಲಿನಂತೆ ತೆಲುತ್ತ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತನ್ನ ಮಡಿಲಲ್ಲಿ ಇರಿಸಿಕೊಂಡು ಸಾಗಿದಾಗ ಭಕ್ತರು ಕೈ ಮುಗಿದು ಭಕ್ತಿ ಸಮರ್ಪಿಸಿದರು. ಜನ ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಆ ದೃಶ್ಯಾವಳಿಗಳನ್ನು ಸೆರೆ ಹಿಡಿದರು.

ಬಸವಪಟ ಆರೋಹಣ: ಗುರುವಾರ ಮಧ್ಯಾಹ್ನ ಬಸವಪಟ ಆರೋಹಣ ಮೂಲಕ ಜಾತ್ರೆಯ ಸಕಲ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.  ಭಕ್ತರು ಸೇರಿಕೊಂಡು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಗವಿಮಠದ ಕರ್ತೃ ಗದ್ದುಗೆಯ ಸುತ್ತ ಐದು ಸಾರಿ ಪ್ರದಕ್ಷಿಣೆ ಹಾಕಿದರು.

ತೆಪ್ಪೋತ್ಸವ ನೋಡಲು ಸೇರಿದ್ದ ಭಕ್ತರು  
ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ನಡೆದ ಬಸವಪಟ ಆರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.