ADVERTISEMENT

ಸೌಲಭ್ಯ ವಂಚಿತ ಚಿಕ್ಕಮ್ಯಾಗೇರಿ ತಾಂಡಾ

ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:26 IST
Last Updated 4 ಜುಲೈ 2020, 14:26 IST
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ತಾಂಡಾದ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿರುವುದು
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ತಾಂಡಾದ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿರುವುದು   

ಯಲಬುರ್ಗಾ: ಯಲಬುರ್ಗಾ ಪಟ್ಟಣಕ್ಕೆ ಕೇವಲ 9 ಕಿ.ಮೀ ದೂರದಲ್ಲಿರುವ ಚಿಕ್ಕಮ್ಯಾಗೇರಿ ತಾಂಡಾ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಇಂದಿಗೂ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ಹಾಗೂ ಉತ್ತಮ ರಸ್ತೆಗಳು ಇಲ್ಲದೇ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಸಿಮೆಂಟ್ ರಸ್ತೆ ನಿರ್ಮಾಣವಾಗಿದ್ದರೂ ಚರಂಡಿಗಳಿಲ್ಲದೇ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿಯುವುದು ಇಲ್ಲಿ ಸಾಮಾನ್ಯವಾಗಿದೆ.

ವಿಪರೀತ ಸೊಳ್ಳೆಗಳ ಕಾಟದಿಂದ ಸಾಕಷ್ಟು ಸಂಖ್ಯೆಯ ಜನರು ಅನಾರೋಗ್ಯದಿಂದ ಬಳಲುವಂತಾಗಿದೆ. ತಾಂಡಾದಲ್ಲಿ ಒಳ ರಸ್ತೆಯು ಇನ್ನೂ ಕಚ್ಚಾರಸ್ತೆಯಾಗಿಯೇ ಉಳಿದಿವೆ. ಅಲ್ಲಲ್ಲಿ ತಗ್ಗು ದಿನ್ನೆಗಳಿದ್ದು, ಮಳೆಬಂದಾಗ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಶುದ್ಧ ಕುಡಿವ ನೀರಿನ ಸೌಲಭ್ಯ ಇಲ್ಲ ಹಾಗೂ ಶೌಚಾಲಯಗಳಿಲ್ಲದೇ ಜನರು ಬಯಲು ಬಹಿರ್ದೆಸೆಗೆ ಹೋಗುವುದು ಸಾಮಾನ್ಯವಾಗಿದೆ.

ADVERTISEMENT

ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ತಾಂಡಾದಲ್ಲಿ ಬಂಜಾರ ಸಮಾಜದವರು ವಾಸವಾಗಿದ್ದು, ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಯಾಗಿದ್ದು, ಆ ಮೂಲಕ ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಾಂಡಾದ ಹನಮಂತಪ್ಪ ನಾಯಕ, ಪರಸಪ್ಪ ಲಂಬಾಣಿ ಇತರರು ಆಗ್ರಹಿಸುತ್ತಾರೆ.

ರಸ್ತೆ ಮೇಲೆ ಹರಿಯುವ ಕೊಳಚೆ ನೀರು ಚರಂಡಿ ಮೂಲಕ ಹೋಗುವಂತೆ ಮಾಡಬೇಕಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.