ADVERTISEMENT

16 ದಿನಗಳಲ್ಲಿ 2000 ಕಿ.ಮೀ. ಸೈಕಲ್‌ ಸವಾರಿ!

ಉತ್ತರ ಭಾರತದ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಗುರಿ ತಲುಪಿದ ಹಿರೇಸಿಂದೋಗಿ ಗ್ರಾಮದ ಸಾಹಸಿಗ

ಪ್ರಮೋದ ಕುಲಕರ್ಣಿ
Published 10 ಜನವರಿ 2026, 5:01 IST
Last Updated 10 ಜನವರಿ 2026, 5:01 IST
ಪಂಜಾಬ್‌ನಲ್ಲಿ ಶಿವರಾಯಪ್ಪ ನೀರಲೋಟಿ
ಪಂಜಾಬ್‌ನಲ್ಲಿ ಶಿವರಾಯಪ್ಪ ನೀರಲೋಟಿ   

ಕೊಪ್ಪಳ: ‘ಸೈಕಲ್‌ ಗಾಲಿಗಳು ವೇಗವಾಗಿ ಗುರಿಯತ್ತ ಮುನ್ನುಗ್ಗುತ್ತಿದ್ದರೆ ಗಾಳಿ ನನ್ನನ್ನು ಅಷ್ಟೇ ವೇಗವಾಗಿ ಹಿಂದಿಕ್ಕುತ್ತಿತ್ತು. ನಿಗದಿತ ಗುರಿ ತಲುಪಿದಾಗ ಈ ಸಾಹಸದ ಪಯಣದಲ್ಲಿ ಎದುರಿಸಿದ ಏರಿಳಿತಗಳು, ಹವಾಮಾನದ ವೈಪರೀತ್ಯ, ಎದುರಾದ ಅಡೆತಡೆಗಳು ಎಲ್ಲವೂ ಕ್ಷಣಾರ್ಧದಲ್ಲಿ ಮಂಜಿನಂತೆ ಕರಗಿ ಹೋದವು’ 

ಇದು ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ ಅವರು ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ.

ಕ್ರಾಂತಿಕಾರಿ ಹೋರಾಟಗಾರ ಭಗತಸಿಂಗ್ ಜನ್ಮ ಸ್ಥಳವಾದ ಪಂಜಾಬಿನ ಬಂಗಾ ಪಟ್ಟಣಕ್ಕೆ ಡಿ.25ರಂದು ತಮ್ಮೂರಿನಿಂದ ಸೈಕಲ್‌ ಮೂಲಕ ಯಾತ್ರೆ ಆರಂಭಿಸಿದ್ದ ಅವರು ಉತ್ತರ ಭಾರತದ ಪ್ರತಿಕೂಲ ಹವಾಮಾನದ ಅನೇಕ ಅಡೆಗಡೆಗಳನ್ನೂ ಮೀರಿ ಬಂಗಾ ಪಟ್ಟಣ ತಲುಪುವ ಕನಸು ನನಸು ಮಾಡಿಕೊಂಡಿದ್ದಾರೆ.

ADVERTISEMENT

ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಾಗಿರುವ ಅವರು ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತ, ಸ್ವಸ್ಥ ಭಾರತ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಯಾತ್ರೆ ಹಮ್ಮಿಕೊಂಡಿದ್ದರು. ಹಿಂದೆ ಪೋರಬಂದರ್‌, ಕಟಕ್‌ಗೆ ಸೈಕಲ್‌ ಯಾತ್ರೆ ನಡೆಸಿದ್ದ ಅವರು ಈ ಬಾರಿ ತಮ್ಮ ನಿಗದಿತ ಸಮಯಕ್ಕಿಂತಲೂ ನಾಲ್ಕು ದಿನ  ಮೊದಲು ಗುರಿ ತಲುಪಿದ್ದಾರೆ. ಅವರ ಸ್ನೇಹಿತ ಹೂವಿನಹಡಗಲಿ ತಾಲ್ಲೂಕಿನ ಮುದೇನೂರು ಗ್ರಾಮದ ನವೀನ ಕುಮಾರ್ ಕೆ. ಕೂಡ ಜೊತೆಯಲ್ಲಿದ್ದಾರೆ.

ಮೊದಲ ದಿನದ ಪ್ರಯಾಣದಲ್ಲಿ ಹಿರೋಸಿಂಧೋಗಿ ಗ್ರಾಮದಿಂದ ಇಳಕಲ್‌ ತನಕ 90 ಕಿ.ಮಿ. ಸೈಕಲ್ ಸವಾರಿ ನಡೆಸಿದ್ದ ಅವರು ದಿನದಿಂದ ದಿನಕ್ಕೆ ವೇಗ ಹೆಚ್ಚಿಸಿಕೊಂಡರು. ಅವರು ಪಂಜಾಬ್‌ಗೆ ತೆರಳುವ ಮಾರ್ಗದುದ್ದಕ್ಕೂ ಅನೇಕರು ಸ್ವಾಗತ ಕೋರಿ ಯುವಕನ ಸಾಧನೆಗೆ ಹುರಿದುಂಬಿಸಿದ್ದಾರೆ. ಇಲ್ಲಿನ ಜಿಲ್ಲಾಕೇಂದ್ರದಿಂದ ವಿಜಯಪುರ, ಸೊಲ್ಲಾಪುರ, ಮಹಾರಾಷ್ಟ್ರದ ಘಾಟ್‌ಗಳ ದಾಟಿ ಔರಂಗಾಬಾದ್‌ ಮಾರ್ಗದ ಮೂಲಕ ಪ್ರಯಾಣ ಕೈಗೊಂಡಿದ್ದರು.

ಈಗಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕ ಚಳಿಯಿದೆ. ಇನ್ನು ಉತ್ತರ ಭಾರತದಲ್ಲಿಯಂತೂ ಒಂದಂಕಿಯ ಹವಾಗುಣ. ಗುರಿ ತಲುಪುವ ಮಾರ್ಗದಲ್ಲಿ 7, 8 ಡಿಗ್ರಿ ಸೆಲ್ಸಿಯಸ್‌ನಂಥ ಕಠಿಣ ಸಮಯದಲ್ಲಿಯೂ ಪೆಡಲ್‌ ತುಳಿದಿದ್ದಾರೆ. ಮೊದಲು ಒಂದು ದಿನಕ್ಕೆ 90ರಿಂದ 110 ಕಿ.ಮೀ. ತನಕ ಸೈಕಲ್‌ ತುಳಿದಿದ್ದ ಅವರು ನಂತರದ ದಿನಗಳಲ್ಲಿ 130ರಿಂದ 145 ಕಿ.ಮೀ. ತನಕ ಸಾಗಿದ್ದರು. 20 ದಿನಗಳಲ್ಲಿ ಗಮ್ಯ ತಲುಪುವ ಗುರಿ ಹೊಂದಿದ್ದರು. ಪಾದರಸದ ವೇಗ, ಚುರುಕುತನ ಹಾಗೂ ಸಂಕಲ್ಪ ಶಕ್ತಿಯಿಂದ ಕನಿಷ್ಠ ಎರಡು ಸಾವಿರ ಕಿ.ಮೀ. ದೂರದ ಮಾರ್ಗವನ್ನು 16 ದಿನಗಳಲ್ಲಿ ಕ್ರಮಿಸಿದ್ದು ವಿಶೇಷ.

ಭಗತಸಿಂಗ್‌ ಜನ್ಮಭೂಮಿಯಿಂದ ವಿಡಿಯೊ ಸಂದೇಶ ಕಳಿಸಿರುವ ಅವರು ‘ಅಂದುಕೊಂಡಂತೆಯೇ ಬಂಗಾಕ್ಕೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ತಲುಪಿದ್ದೇನೆ. ತುಂಬಾ ಖುಷಿಯಾಗುತ್ತಿದೆ, ಸಾಕಷ್ಟು ತೊಂದರೆಗಳು ಬಂದರೂ ನನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ. 6ರಿಂದ 7 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ವಾತಾವರಣವಿದ್ದರೂ ಗುರಿ ಮುಟ್ಟುವ ಆಸೆ ಮಾತ್ರ ಕೈ ಬಿಡಲಿಲ್ಲ. ಇದಕ್ಕೆ ಸಹಕಾರ ನೀಡಿದ, ಬೆಂಬಲ ತೋರಿದ ದೊಡ್ಡ ಬಳಗವೇ ಇದೆ’ ಎಂದು ಹೇಳುವಾಗ ಅವರ ಮೊಗದ ಮೇಲೆ ಮಂದಹಾಸ ನಲಿದಾಡುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.