ಕುಷ್ಟಗಿ: ಹೊರರೋಗಿಗಳ ವಿಭಾಗದ ಕೊಠಡಿ ಸೋರುತ್ತಿದ್ದು, ಕೆಟ್ಟ ವಾಸನೆ ಬರುತ್ತಿದೆ. ರೋಗಿಗಳ ಮಂಚಗಳು ತುಕ್ಕು ಹಿಡಿದಿವೆ. ಬೆಡ್‌ಗಳು ಹರಿದುಹೋಗಿವೆ. ಸ್ವಚ್ಛತೆ ಕೆಲಸಕ್ಕೆ ಸಿಬ್ಬಂದಿಯೇ ಇಲ್ಲ..
ತಾಲ್ಲೂಕಿನಲ್ಲಿ ಡೆಂಗಿ ರೋಗಬಾಧೆ ಸಮಸ್ಯೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಶುಕ್ರವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ತುರ್ತು ಸಭೆ ನಡೆಸಿದ ವಿಧಾನಸಭಾ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅವರ ಬಳಿ ವೈದ್ಯಾಧಿಕಾರಿಗಳು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದನ್ನು ಕೇಳಿ ಶಾಸಕ ಪಾಟೀಲ ಸುಸ್ತಾದ ಪ್ರಸಂಗ ನಡೆಯಿತು.
ವೈದ್ಯರು ಹೇಳಿದ್ದು: ನಿತ್ಯ 300-400 ಹೊರ ರೋಗಿಗಳು ಬರುತ್ತಾರೆ. ಸರಾಸರಿ ನಿತ್ಯ 10 ರಂತೆ ಒಂದೂವರೆ ವರ್ಷದಲ್ಲಿ 2000 ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಮೂವರು ಶಸ್ತ್ರಚಿಕಿತ್ಸಕರಿದ್ದು, ತುರ್ತು ಸಂದರ್ಭದಲ್ಲಿ ನಾಲ್ವರು ತಜ್ಞ ವೈದ್ಯರ ಅಗತ್ಯವಿರುತ್ತದೆ. ಹಾಗಾಗಿ ಸಾಮಾನ್ಯ ರೋಗಿಗಳನ್ನು ನೋಡುವುದಕ್ಕೂ ಸಮಸ್ಯೆಯಾಗಿದ್ದು, ನಾಲ್ವರು ಎಂಬಿಬಿಎಸ್ ವೈದ್ಯರ ಅವಶ್ಯಕತೆ ಇದೆ. ಅರ್ಬನ್ ಹೆಲ್ತ್ ಸೆಂಟರ್ ಸ್ಥಾಪನೆಯಾದರೆ ಒತ್ತಡ ನೀಗಿಸಲು ಸಾಧ್ಯವಾಗುತ್ತದೆ ಎಂದರು.
ಆಸ್ಪತ್ರೆಯ ಎಲುಬು–ಕೀಲು, ಮಕ್ಕಳ, ದಂತ ಹೀಗೆ ವಿವಿಧ ವಿಭಾಗಗಳಿಗೆ ಸಲಕರಣೆಗಳ ಅಗತ್ಯವಿದೆ. ಆಯಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಯಲ್ಲಿ ₹2.50 ಕೋಟಿ ಹಣ ಇದ್ದರೂ ಐದು ರೂಪಾಯಿ ಖರ್ಚು ಮಾಡುವುದಕ್ಕೂ ಅಧಿಕಾರವಿಲ್ಲ ಎಂದು ವೈದ್ಯರು ವಿವರಿಸಿದರು.
ಈ ಎಲ್ಲ ಸಮಸ್ಯೆ ಆಲಿಸಿದ ಶಾಸಕ ಪಾಟೀಲ,‘ಕೆಲಸಗಾರರು, ಪರಿಚಾರಕರು ಸೇರಿ 7 ಜನರನ್ಉ ನೇಮಕ ಮಾಡಿಕೊಂಡು ಆರೋಗ್ಯ ರಕ್ಷಾ ಸಮಿತಿ ಹಣ ಪಾವತಿಸಬೇಕು. ಮತ್ತು ಎಬಿಆರ್‌ಕೆದಲ್ಲಿ ಸಣ್ಣಪುಟ್ಟ ಕೆಲಸ ಮತ್ತು ದುರಸ್ತಿಗೆ ಹಣ ಖರ್ಚು ಮಾಡುವುದಕ್ಕೆ ಅವಕಾಶ ಇದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಸೂಚಿಸಿದರು.
ವಿದ್ಯುತ್ ಸಮಸ್ಯೆ ಎದುರಾದಾಗ ವಿದ್ಯುತ್ ಜನಕ ಚಾಲು ಮಾಡಿದರೆ ತಾಸಿಗೆ 70 ಲೀಟರ್ ಡೀಸೆಲ್ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದಾಗ ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಹೊಸದಾಗಿ ಖರೀದಿಸುವ ಬದಲು ಹಳೆ ಮಂಚಗಳಿಗೆ ಬಣ್ಣ ಕೊಟ್ಟರೆ ಸಾಕು ಎಂದು ವೈದ್ಯರು ಹೇಳಿದರು. ಅಲ್ಲದೆ ಹೊಸದಾಗಿ ಬೆಡ್ ಖರೀದಿಗೂ ಸೂಚಿಸಲಾಯಿತು.
ಲಿಂಗನಬಂಡಿ ಗ್ರಾಮದ ಒಬ್ಬ ಮಹಿಳೆಯಲ್ಲಿ ಮಾತ್ರ ಡೆಂಗಿ ದೃಢಪಟ್ಟಿದ್ದು, ಅಂಥ ಸಮಸ್ಯೆ ಇಲ್ಲ. ಆದರೆ ವಿಷಮ ಶೀತಜ್ವರ ವಿಪರೀತವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದರು. ಸಿ.ಟಿ ಸ್ಕ್ಯಾನ್ ಯಂತ್ರ ನಿರ್ವಹಣೆಗೆ ತಂತ್ರಜ್ಞರ ಅಗತ್ಯ ನೀಗಿಸಲು ಪ್ರಯತ್ನಿಸುವುದಾಗಿ ಶಾಸಕ ತಿಳಿಸಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಆಸ್ಪತ್ರೆ ಮುಖ್ಯ ವೈದ್ಯ ಡಾ.ಕೆ.ಎಸ್.ರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಸಯ್ಯದ್ ರಹೀಂ ಮತ್ತು ಇತರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.