ಅಳವಂಡಿ: ನೂರಕ್ಕೂ ಹೆಚ್ಚು ವರ್ಷಗಳ ನಂತರ ಸಮೀಪದ ಹಲವಾಗಲಿ ಗ್ರಾಮದ ಗ್ರಾಮ ದೇವತೆ ಜಾತ್ರಾ ನಡೆಯುತ್ತಿದ್ದು, ಗ್ರಾಮದಲ್ಲಿ ಎಲ್ಲೆಡೆ ಸಂಭ್ರಮ, ಸಡಗರ ಮನೆಮಾಡಿದೆ.
ಏ.25 ರ ಶುಕ್ರವಾರ ನಂದಾದೀಪ ಹಚ್ಚುವ ಕಾರ್ಯದಿಂದ ಆರಂಭವಾದ ಗ್ರಾಮ ದೇವತೆ ಜಾತ್ರೆಯು ಮೇ 1ರವರೆಗೂ ನಡೆಯಲಿದೆ. ಬಹಳ ವರ್ಷಗಳ ನಂತರ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗ್ರಾಮಸ್ಥರು ಕೆಲವೊಂದಿಷ್ಟು ಕಟ್ಟುನಿಟ್ಟಿನ ಆಚರಣೆಗಳನ್ನು ಆಚರಿಸುತ್ತಿದ್ದಾರೆ.
ಜಾತ್ರೆ ಆರಂಭವಾದ ದಿನದಿಂದಲೂ ಗ್ರಾಮದಲ್ಲಿ ಯಾರ ಮನೆಯಲ್ಲೂ ರೊಟ್ಟಿ ಮಾಡಿಲ್ಲ. ಕುಟ್ಟುವ ಹಾಗೂ ಬೀಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಮನೆ ಮತ್ತು ಅಂಗಳ ಎಲ್ಲೆಡೆ ಕೂಡ ಕಸ ಹೊಡೆಯುವಂತಿಲ್ಲ. ಎತ್ತಿನ ಬಂಡಿಗಳನ್ನು ಸಹ ಕಟ್ಟಿಲ್ಲ. ಬಂಡಿಯ ಗಾಲಿಗಳನ್ನು ಬೇರ್ಪಡಿಸಿದ್ದಾರೆ. ಗ್ರಾಮದಲ್ಲಿ ಯಾವ ವಾಹನಗಳು ಕೂಡ ಓಡಾಡುವಂತಿಲ್ಲ ಹಾಗೂ ಬರಿಗಾಲಿನಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಹೀಗೆ ಅನೇಕ ಕಟ್ಟುನಿಟ್ಟಿನ ಪದ್ಧತಿಗಳನ್ನು ಆಚರಿಸುವ ಮೂಲಕ ಗ್ರಾಮಸ್ಥರು ಜಾತ್ರೆಯನ್ನು ಮಾಡುತ್ತಿದ್ದಾರೆ.
ಜಾತ್ರೆಯ ನಿಮಿತ್ತ ಗ್ರಾಮ ದೇವತೆ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಗ್ರಾಮದ ಎಲ್ಲಾ ಸಮುದಾಯದ ಜನರು ಗ್ರಾಮ ದೇವತೆ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಗ್ರಾಮ ದೇವತೆಯ ಗಂಗಾಪೂಜೆ ಕಾರ್ಯಕ್ರಮ ನಡೆಯಿತು. ಗಂಗಾಪೂಜೆ ಪೂಜೆ ಬಳಿಕ ದೇವತೆಯನ್ನು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಡೊಳ್ಳಿನ ಮೇಳ ಸೇರಿದಂತೆ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಚೌತಿ ಮನೆಗೆ ಕೂಡಿಸಲಾಯಿತು. ನಂತರ ರಾತ್ರಿ ರಂಗ ಹಾಕುವುದು ಹಾಗೂ ಗಟ್ಟಿಗಡಿಗೆ ತರುವ ಕಾರ್ಯಕ್ರಮ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಏ.30ರಂದು ದೇವಿಗೆ ಭಕ್ತರಿಂದ ಹರಕೆ ತೀರಿಸುವುದು. ಮೇ 1ರಂದು ಪೋತರಾಜನ ಕಾರ್ಯಕ್ರಮ, ಶ್ರೀದೇವಿಯು ಗಡಿಗೆ ಹೋಗಿ ಬರುವುದು. ಮೇ 2ರಂದು ಶ್ರೀದೇವಿ ಗದ್ದಿಗೆಗೊಳಿಸುವುದು. ನಂತರ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮೇ 6ರಂದು ದೈವದವರಿಂದ ಉಡಿ ತುಂಬುವ ಕಾರ್ಯ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.