ADVERTISEMENT

ಕನಕಗಿರಿ: ಕೈ ಹಿಡಿದ ನರೇಗಾ, ಬದುಕಿನ ಭರವಸೆ ಮೂಡಿಸಿದ ಗುಲಾಬಿ 

ಬಟನ್ ರೋಜ ಗುಲಾಬಿಗೆ ಉತ್ತಮ ಮಾರುಕಟ್ಟೆ

ಮೆಹಬೂಬ ಹುಸೇನ
Published 22 ಸೆಪ್ಟೆಂಬರ್ 2021, 19:30 IST
Last Updated 22 ಸೆಪ್ಟೆಂಬರ್ 2021, 19:30 IST
ಗುಲಾಬಿ ಬೆಳೆಯೊಂದಿಗೆ ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ರೈತ ಯಮನೂರಪ್ಪ
ಗುಲಾಬಿ ಬೆಳೆಯೊಂದಿಗೆ ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ರೈತ ಯಮನೂರಪ್ಪ   

ಕನಕಗಿರಿ: ಖಾಸಗಿ ವಾಹನ ಚಾಲಕನಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಮೀಪದ ಹುಲಿಹೈದರ ಗ್ರಾಮದ ಯಮನೂರಪ್ಪ ಜಂಜೇರಿಗೆ ಗುಲಾಬಿ ಬೆಳೆ ಬದುಕಿನಲ್ಲಿ ಭರವಸೆ ಮೂಡಿಸಿದೆ.

ಕಳೆದ ವರ್ಷ ಲಾಕ್‌ಡೌನ್ ಘೋಷಣೆಯಿಂದ ಕೆಲಸ ಕಳೆದುಕೊಂಡಾಗ ಬೆಂಗಳೂರಿನಲ್ಲಿ ಯಮನೂರಪ್ಪಗೆ ಜೀವನ ನಡೆಸುವುದು ಕಷ್ಟವಾದಾಗ ಊರಿಗೆ ಬಂದರು. ನಂತರ ಅವರ ಕೈ ಹಿಡಿದಿದ್ದು ಉದ್ಯೋಗ ಖಾತ್ರಿ ಯೋಜನೆ.

ಕುಟುಂಬ ಜೀವನಕ್ಕೆ ಆಸರೆಯಾಗಿರುವುದು ಒಂದು ಎಕರೆ ಭೂಮಿ. ಅದರಲ್ಲಿ ಬೆಳೆ ಬೆಳೆದು ಹೊಸ ಬದುಕು ಕಟ್ಟಿಕೊಳ್ಳಲು ಶ್ರಮಿಸಿದರು. ಉದ್ಯೋಗ ಖಾತರಿ ಚೀಟಿ ಪಡೆದು ₹ 1,99,692 ಸಹಾಯಧನದ ಸೌಲಭ್ಯ ಪಡೆದುಕೊಂಡರು. ಬೆಂಗಳೂರಿನಿಂದ ₹ 26 ಕ್ಕೆ ಒಂದರಂತೆ ₹ 1 ಲಕ್ಷ ನೀಡಿ 4,000 ಗುಲಾಬಿ (ಮೂರಬಲ ತಳಿ) ಸಸಿಗಳನ್ನು ತಂದು ತನ್ನ ಹೊಲದಲ್ಲಿ 4,000 ಗುಂಡಿ ತೋಡಿಸಿ ಗುಲಾಬಿ ಸಸಿ ನೆಟ್ಟರು.

ADVERTISEMENT

ಆರಂಭದಲ್ಲಿ ಗುಲಾಬಿಗೆ ಕೆಲ ರೋಗಗಳು ಬೆನ್ನು ಹತ್ತಿ ರೈತನಿಗೆ ಆತಂಕ ತಂದರೂ ಇತರೆ ರೈತರು ಹಾಗೂ ಅಧಿಕಾರಿಗಳಿಂದ ಸಲಹೆ ಪಡೆದು ತಿಪ್ಪೆ ಗೊಬ್ಬರ, ಇತರೆ ಔಷಧಿ ಸಿಂಪಡಣೆ ಮಾಡಿದ್ದರಿಂದ ದಿನ ಕಳೆದಂತೆ ಬೆಳೆ ಚೇತರಿಕೆ ಕಂಡಿತು.

ನಿರಂತರ ಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಕುಟುಂಬದವರ ಸಹಕಾರ ಪಡೆದು ತೋಟ ನಿರ್ವಹಣೆ ಮಾಡಿದ ಪರಿಣಾಮ ಈಗ ತೃಪ್ತಿದಾಯಕ ಜೀವನ ಸಾಗಿಸುತ್ತಿದ್ದಾರೆ.

ಸದ್ಯ ಜಂಜೇರಿ ತೋಟದಲ್ಲಿ ಬಟನ್ ರೋಜ ಗುಲಾಬಿ ಬೆಳೆ ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. ಕಳೆದ 9 ತಿಂಗಳಿಂದಲೂ ಯಮನೂರಪ್ಪನ ಕೈಗೆ ದಿನಕ್ಕೆ 10 ರಿಂದ 15 ಕೆಜಿ. ಗುಲಾಬಿ ಹೂ ಸಿಗುತ್ತಿದೆ.

ಕನಕಗಿರಿ, ಗಂಗಾವತಿಯಲ್ಲಿ ಉತ್ತಮ ಮಾರುಕಟ್ಟೆ ಸಿಕ್ಕಿದ್ದು ಒಂದು ಕೆಜಿಗೆ ಅಂದಾಜು ₹ 100ರಿಂದ ₹ 150 ಕ್ಕೆ ಮಾರಾಟ ಮಾಡುತ್ತಿದ್ದಾರೆ. ದಿನಕ್ಕೆ ಏನಿಲ್ಲವೆಂದರೂ ₹ 800 ರಿಂದ ₹ 1200 ವರೆಗೆ ಆದಾಯ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾಲೀಕರೊಬ್ಬರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು, ಬಿಡುವಿನ ವೇಳೆಯಲ್ಲಿ ಅವರ ಮನೆ ಆವರಣದಲ್ಲಿದ್ದ ಗುಲಾಬಿ ಉದ್ಯಾನವಮ್ಮಿ ನಿರ್ವಹಣೆ ಮಾಡುತ್ತಿದ್ದರು. ಇದೇ ಅವರಿಗೆ ಪ್ರೇರಣೆಯಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ, ತೋಟಗಾರಿಕೆಯ ರೇವಣಪ್ಪ ಅವರ ಪ್ರೋತ್ಸಾಹ, ಪತ್ನಿ ಶರಣಮ್ಮ ಹಾಗೂ ಇಬ್ಬರು ಮಕ್ಕಳ ಸಹಕಾರವನ್ನು ಯಮನೂರಪ್ಪ ಸ್ಮರಿಸುತ್ತಾರೆ.

ಗುಲಾಬಿ ಗಿಡ ಇನ್ನಷ್ಟು ಎತ್ತರವಾದರೆ ದಿನಕ್ಕೆ ಕ್ವಿಂಟಲ್‌ಗೂ ಹೆಚ್ಚು ಗುಲಾಬಿ ಹೂವು ದೊರೆಯಲಿದೆ. ಇದರಿಂದ ಉತ್ತಮ ಲಾಭ ಪಡೆಯಬಹುದು ಎನ್ನುತ್ತಾರೆ ಅವರು.

ಮಂಗಳವಾರ ತೋಟಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರುನ್ನಮ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೆ. ವಿ.ಕಾವ್ಯರಾಣಿ ಅವರು ರೈತನ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

**

ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ತೋಟಗಾರಿಕೆ ಬೆಳೆ ಬೆಳೆಯಲು ಅವಕಾಶವಿದೆ. ರೈತ ಫಲಾನುಭವಿಗಳು ಸಹಾಯಧನ ಪಡೆದುಕೊಳ್ಳಬೇಕು.
- ಫೌಜಿಯಾ ತರುನ್ನಮ್, ಜಿ.ಪಂ. ಸಿಇಒ

ವಿವಿಧ ಬೆಳೆಗಳನ್ನು ಬೆಳೆಯಲು ನರೇಗಾ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಹಲವು ಅವಕಾಶಗಳಿವೆ. ಬಟನ್ ರೋಜ ಗುಲಾಬಿ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ.
-ರತ್ನಪ್ರಿಯಾ ಆರ್.ಯರಗಲ್ಲ ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.