ಕುಷ್ಟಗಿ: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಒಂದೇ ತಾಸಿನಲ್ಲಿ ಮೂವರು ರೈತರ ಕಿಸೆಗೆ ಕತ್ತರಿ ಹಾಕಿ ₹82 ಸಾವಿರ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಹೊಸಹಳ್ಳಿ ಹನುಮಂತ ಹಂಚಿನಾಳ, ನಿಲೋಗಲ್ ಗ್ರಾಮದ ಹನುಮಪ್ಪ ರಗಣಿ ಮತ್ತು ತಾವರಗೇರಾದ ಶರಣಪ್ಪ ನಾರಿನಾಳ ಹಣ ಕಳೆದುಕೊಂಡ ರೈತರು. ಎಲ್ಲರೂ ಅಂಗಿಯ ಒಳಗೆ ಕಿಸೆ ಇರುವ ಬನಿಯನ್ ತೊಟ್ಟಿದ್ದು ಆ ಕಿಸೆಗೆ ಬ್ಲೇಡ್ ಹಾಕಿದ್ದನ್ನು ರೈತರು ತೋರಿಸಿದರು.
ಎಮ್ಮೆ ಮಾರಿ ಬಂದ ಹಣದೊಂದಿಗೆ ಹನುಮಸಾಗರದ ಬಸ್ ಮೂಲಕ ಹೊಸಳ್ಳಿ ತೆರಳುತ್ತಿದ್ದ ಹನುಮಂತ ಹಂಚಿನಾಳ ಅವರ ಬಳಿ ₹24 ಸಾವಿರ ದೋಚಿದರು. ಕಿಸೆಗಳ್ಳತನದ ಸಂದರ್ಭ ₹10 ಸಾವಿರ ಹಣದ ಕಟ್ಟು ಕಳಚಿ ಹನುಮಂತ ಅವರ ಕಾಲಿನ ಮೇಲೆ ಬಿದ್ದಿದ್ದೆ. ಅದನ್ನು ಎತ್ತಿಕೊಳ್ಳುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ. ₹14 ಸಾವಿರ ಹಣ ಹೋಗಿ ಹತ್ತು ಸಾವಿರವಾದರೂ ಉಳಿದದ್ದೇ ಸಮಾಧಾನದ ಸಂಗತಿ ಎಂದು ರೈತ ಹೇಳಿದರು. ಅದೇ ಬಸ್ ಏರುತ್ತಿದ್ದ ಹನುಮಪ್ಪ ರಗಣಿ ಅವರ ಜೇಬಿಗೆ ಕತ್ತರಿ ಹಾಕಿ ₹8,500 ಹಣ ಲಪಟಾಯಿಸಲಾಗಿದೆ.
ಮತ್ತೊಬ್ಬ ರೈತ ಶರಣಪ್ಪ ನಾರಿನಾಳ ಎಂಬುವವರು ಕುರಿ ಖರೀದಿಸಲು ಬಸ್ಸಿನಲ್ಲಿ ಹೋಗುತ್ತಿದ್ದಾಗ ₹60 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದರಾದರೂ ಕಳ್ಳರ ಸುಳಿವು ದೊರೆಯಲಿಲ್ಲ. ನಂತರ ಪೊಲೀಸ್ ಠಾಣೆಗೆ ಬಂದ ರೈತರು ಮಾಹಿತಿ ನೀಡಿದರು. ಈ ಬಗ್ಗೆ ರೈತರಿಂದ ಲಿಖಿತ ದೂರು ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳಿದರು.
ಪೊಲೀಸರು ನಿಗಾ ವಹಿಸದ ಕಾರಣ ಮುಗ್ಧರು, ರೈತರನ್ನು ಗುರಿಯಾಗಿಸಿಕೊಂಡೆ ಕಿಸೆಗಳ್ಳತನ ಮಾಡುತ್ತಿದ್ದು, ಕಳ್ಳರಿಗೆ ಅಂಜಿಕೆ, ಅಳುಕು ಇಲ್ಲದಂತಾಗಿದೆ. ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಪ್ರಮುಖ ಹುಸೇನಪ್ಪ ಹಿರೇಮನಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.