ಕನಕಗಿರಿ: ಇಲ್ಲಿನ ಗುಡ್ಡದ ಮೇಲಿರುವ ತೊಂಡಿತೇವರಪ್ಪನ ರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಂಠೆಪ್ಪ ಪೂಜಾರ ಅವರ ಮನೆಯಿಂದ ಹೊರಟ ಪಲ್ಲಕ್ಕಿ ಉತ್ಸವ ಭಾಜಾ ಭಜಂತ್ರಿ, ಡೊಳ್ಳು ಕುಣಿತ, ಗೊಂಬೆ ಕುಣಿತದೊಂದಿಗೆ ತೊಂಡಿತೇವರಪ್ಪ ದೇವಸ್ಥಾನದವರೆಗೆ ಸಡಗರ, ಸಂಭ್ರಮದಿಂದ ನೆರವೇರಿತು.
ರಥೋತ್ಸವದ ನಿಮಿತ್ತ ಆಂಜನೇಯ ಮೂರ್ತಿಯನ್ನು ಎಲೆ, ಹೂಗಳಿಂದ ವಿಶೇಷವಾಗಿ ಅಲಂಕಾರಗೊಳಿಸಲಾಗಿತ್ತು. ಬೆಳಿಗ್ಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ, ಮಹಾಮಂಗಳಾರತಿ, ನೈವೇದ್ಯ, ಪವಮಾನ ಹೋಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.
ಕಾಯಿ, ಕರ್ಪೂರ, ನೈವೇದ್ಯ ಸಲ್ಲಿಸಿ ದೇವರ ದರ್ಶನಕ್ಕಾಗಿ ಭಕ್ತರು ಸರದಿಯಲ್ಲಿ ನಿಂತಿದ್ದರು. ಭಕ್ತರು ದೀಡ ನಮಸ್ಕಾರ ಹಾಕಿ ಬೃಹತ್ ಪ್ರಮಾಣದ ಹೂವಿನ ಹಾರ ಮತ್ತು ವಿವಿಧ ಕಾಣಿಕೆಗಳನ್ನು ನೀಡಿ ಭಕ್ತಿ ಮೆರೆದರು. ರಥೋತ್ಸವ ನಡೆದಾಗ ನೆರೆದ ಭಕ್ತರು ಹೂ, ಬಾಳೆ ಹಣ್ಣು, ಉತ್ತತ್ತಿ ಎಸೆದು ಧನ್ಯತೆ ಮರೆದರು.
ರಥೋತ್ಸವದ ನಂತರ ಪಲ್ಲಕಿ ಹೊತ್ತುಕೊಂಡ ಭಕ್ತರು ಭಜನಾ ಪದ, ಭಕ್ತಿ ಗೀತೆಗಳನ್ನು ಹಾಡಿ, ಕುಣಿಯುವ ಮೂಲಕ ದೇಗುಲದ ಸುತ್ತಲೂ ಐದು ಸುತ್ತು ಹಾಕಿ ಧನ್ಯತಾ ಭಾವ ಪ್ರದರ್ಶಿಸಿದರು. ದಾಸವಾಣಿ, ಅರ್ಚಕರ ವೇದ ಮಂತ್ರ, ಗೊಂಬೆ ಕುಣಿತ, ಭಜನೆ, ಕೋಲಾಟ ಗಮನ ಸೆಳೆದವು. ಪಟ್ಟಣ ಸೇರಿದಂತೆ ಬೆಂಗಳೂರು, ಗದಗ, ಸಿಂಧನೂರು, ಕೊಪ್ಪಳ, ಕುಷ್ಟಗಿ, ಹೊಸಪೇಟೆ, ಸುತ್ತಮುತ್ತಲ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು. ದೇಗುಲದ ಸುತ್ತಲೂ ಬೆಳೆದು ನಿಂತಿರುವ ಹೊಲದಲ್ಲಿ ಭಕ್ತರು ಸಿಹಿ ಖಾದ್ಯ, ಮಂಡಾಳು ಮಿರ್ಚಿ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.