ಗಂಗಾವತಿ: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ನಗರದ ಕೇಂದ್ರೀಯ ಬಸ್ ನಿಲ್ದಾಣ ಸಮೀಪ ಹಣ್ಣು, ಚಪ್ಪಲಿ ಮಾರಾಟ ಹಾಗೂ ಖಾಲಿ ಟಿಫಿನ್ ಬಂಡಿ ಸ್ಥಳಕ್ಕೆ ನುಗ್ಗಿದ್ದು, ವೃದ್ಧೆ ಗಾಯಗೊಂಡಿದ್ದಾರೆ.
ಗಾಯಾಳು ವೃದ್ಧೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ ಖಾಲಿ ಟ್ರ್ಯಾಕ್ಟರ್ ಕೃಷ್ಣದೇವರಾಯ ವೃತ್ತದಿಂದ ಕೇಂದ್ರೀಯ ಬಸ್ ನಿಲ್ದಾಣ ಮಾರ್ಗವಾಗಿ ಆನೆಗೊಂದಿ ರಸ್ತೆಯತ್ತ ತೆರಳಿತ್ತು. ಬಸ್ ನಿಲ್ದಾಣ ಮುಂಭಾಗ ಹೊರಡುವಾಗ ಚಾಲಕ ನಿಯಂತ್ರಣ ತಪ್ಪಿ, ಎಡವಿ ರಸ್ತೆಗೆ ಬಿದ್ದಿದ್ದಾರೆ. ಖಾಲಿ ಟ್ರ್ಯಾಕ್ಟರ್ ಚಾಲಕ ನಿಲ್ಲದೆ ನೇರವಾಗಿ, ಬೇಕರಿ ಬಳಿ ಹಣ್ಣು, ಚಪ್ಪಲಿ ಮಾರುವ ಸ್ಥಳಕ್ಕೆ ನುಗ್ಗಿದೆ. ಹಣ್ಣು ಮಾರುವ ವೃದ್ಧೆ ಪ್ರಾಣಾಪಯಾದಿಂದ ಪಾರಾಗಿದ್ದಾರೆ.
ಹಣ್ಣು ಬಂಡಿ, ಚಪ್ಪಲಿಗಳು ಚಿಲ್ಲಾಪಿಲ್ಲಿಯಾಗಿವೆ. ಅಲ್ಲಿಯೇ ಇದ್ದ ಖಾಲಿ ಟಿಫೀನ್ ಸೆಂಟರ್ ಬಂಡಿಗೆ ಡಿಕ್ಕಿ ಹೊಡೆದಿದ್ದು, ಬಂಡಿ ನಜ್ಜುಗುಜ್ಜಾಗಿದೆ. ಘಟನೆ ಕಂಡು ಸಣ್ಣ-ಪುಟ್ಟ ವ್ಯಾಪಾರಸ್ಥರು, ಸಾರ್ವಜನಿಕರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಎಡವಿ ಬಿದ್ದ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಂಚಾರಿ ಪೊಲೀಸರು ಬಂದು ಪರಿಶೀಲಿಸಿ, ವರದಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.