ADVERTISEMENT

ಕುಷ್ಟಗಿ | 'ರೈಲು ಸಂಚಾರ; ಜನರ ಸಹಕಾರ ಅಗತ್ಯ'

ಪೂರ್ವಭಾವಿ ಸಭೆ, ಸಂಘ ಸಂಸ್ಥೆಗಳಿಗೆ ಶಾಸಕ ದೊಡ್ಡನಗೌಡ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:10 IST
Last Updated 13 ಮೇ 2025, 16:10 IST
ಕುಷ್ಟಗಿಯಲ್ಲಿ ಮಂಗಳವಾರ ಶಾಸಕ ದೊಡ್ಡನಗೌಡ ಪಾಟೀಲ ರೈಲ್ವೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು
ಕುಷ್ಟಗಿಯಲ್ಲಿ ಮಂಗಳವಾರ ಶಾಸಕ ದೊಡ್ಡನಗೌಡ ಪಾಟೀಲ ರೈಲ್ವೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು   

ಕುಷ್ಟಗಿ: ಪಟ್ಟಣದಲ್ಲಿ ಮೇ 15 ರಂದು ನೂತನ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಪಟ್ಟಣದ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಹಾಗೂ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಮಂಗಳವಾರ ನಿಲ್ದಾಣದಲ್ಲಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಇಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ  ನಡೆಸಿದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿಯೂ ರೈಲು ಸಂಚಾರ ಸೇವೆ ಆರಂಭಗೊಂಡಿರುವುದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದ್ದು ಇಂಥ ಅವಿಸ್ಮರಣೀಯ ಗಳಿಗೆಗೆ ತಾಲ್ಲೂಕಿನ ಜನ ಸಾಕ್ಷಿಯಾಗಬೇಕು ಎಂದರು.

ಕಾರ್ಯಕ್ರಮಕ್ಕೆ ಜನರು ಬರಲು ಹೋಗಲು ವಾಹನ ವ್ಯವಸ್ಥೆ, ಕುಡಿಯುವ ನೀರು, ನೆರಳು, ಲಘು ಉಪಹಾರದ ವ್ಯವಸ್ಥೆ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಸದ್ಯ ಹುಬ್ಬಳ್ಳಿವರೆಗೆ ಮಾತ್ರ ರೈಲು ಸಂಚರಿಸಲಿದ್ದು, ಬೆಂಗಳೂರಿಗೆ ಪ್ರತ್ಯೇಕ ರೈಲು ಸಂಚಾರಕ್ಕೆ ಅನುಮತಿಸುವಂತೆ ಕೋರಿ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಗುರುವಾರ ಬೆಳಿಗ್ಗೆ ಪಟ್ಟಣದ ರೈಲು ನಿಲ್ದಾಣದಲ್ಲಿ 11 ಗಂಟೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದು, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ವೀರೇಶ ಬಂಗಾರಶೆಟ್ಟರ, ಫಕೀರಪ್ಪ ಚಳಗೇರಿ, ಭೀಮನಗೌಡ ಪಾಟೀಲ, ಹಂಪನಗೌಡ ಬಳೂಟಗಿ, ಸತ್ಯಪ್ಪ ಮಡಿವಾಳರ, ಬಾಬು ಘೋರ್ಪಡೆ, ಸಂಗನಗೌಡ ಪಾಟೀಲ, ಮಹಾಂತೇಶ ಬದಾಮಿ, ನಜೀರಸಾಬ್ ಮೂಲಿಮನಿ, ಪಾಂಡುರಂಗ ಆಶ್ರಿತ, ಮಹಾಂತಯ್ಯ ಅರಳೆಲೆಮಠ, ಶರಣಪ್ಪ ಹೂಗಾರ, ಸಯ್ಯದ್‌ ಮುರ್ತುಜಾ, ಪರಶುರಾಮ ನಿರಂಜನ, ಅಶೋಕ ಬಳೂಟಗಿ, ಶಶಿಧರ ಕವಲಿ, ಜಯತೀರ್ಥ ಸೌದಿ, ಕಂದಕೂರಪ್ಪ, ಮಹಾಂತೇಶ ಮಂಗಳೂರು, ಮುತ್ತಣ್ಣ ಬಾಚಲಾಪುರ, ಅನಿಲಕುಮಾರ ಆಲಮೇಲ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.