
ಮುನಿರಾಬಾದ್: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಹೊಸ ಲಿಂಗಾಪುರ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ಲಾರಿ ಒಂದು ಉರುಳಿ ಬಿದ್ದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿದ್ದು, ಬಿದ್ದಲಾರಿಯನ್ನು ಶನಿವಾರ ಸಂಜೆ ತೆರವುಗೊಳಿಸಲಾಯಿತು.
ಹತ್ತಿಯನ್ನು ಸಾಗಿಸುತ್ತಿದ್ದ ತಮಿಳುನಾಡು ಮೂಲದ ಲಾರಿ ಕುಷ್ಟಗಿ ಕಡೆಯಿಂದ ಹೊಸಪೇಟೆ ಕಡೆಗೆ ತೆರಳುತ್ತಿತ್ತು. ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರವನ್ನು ಸರ್ವಿಸ್ ರಸ್ತೆಯಲ್ಲಿ ತಿರುಗಿಸಲಾಗಿತ್ತು.
ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ಬಿದ್ದ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು. ಲಾರಿಯನ್ನು ಮೇಲೆತ್ತುವ ಸಮಯದಲ್ಲಿ ಕ್ರೇನ್ ಕೂಡ ಮಗುಚಿ ಬಿದ್ದ ಘಟನೆ ನಡೆಯಿತು. ಪರಿಣಾಮ ಹಿಟ್ನಾಳ ಟೋಲ್ ಗೇಟ್ ಕಡೆಯಿಂದ ಹೊಸಪೇಟೆಗೆ ಹೋಗುವ ಹೆದ್ದಾರಿಯಲ್ಲಿನ ವಾಹನಗಳು ಎರಡು ಕಿಲೋಮೀಟರ್ ಉದ್ದಕ್ಕೆ ಸ್ತಬ್ಧವಾದವು. ಶನಿವಾರ ಸಂಜೆ 5.30ಕ್ಕೆ ಲಾರಿಯನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹೊಸಹಳ್ಳಿಯಲ್ಲಿ ಉಂಟಾದ ಸಂಚಾರದಟ್ಟಣೆಯಿಂದ ಕೆಲವು ಲಘುವಾಹನಗಳು ಹುಲಿಗಿ ಮತ್ತು ಹೊಸಲಿಂಗಾಪುರ ಮಾರ್ಗವಾಗಿ ಹಳೆ ಲಿಂಗಾಪುರ ಮಾರ್ಗವಾಗಿ ಮುನಿರಾಬಾದ್ ಬಳಿ ಹೆದ್ದಾರಿ ಸೇರಿದವು.
ಸಾರ್ವಜನಿಕರ ಆಗ್ರಹ: ಹೊಸಲಿಂಗಾಪುರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ನಿಧಾನ ಗತಿಯಲ್ಲಿದ್ದು, ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.