ADVERTISEMENT

ಕ್ಷಯಮುಕ್ತ ಜಿಲ್ಲೆ: ಸಹಕಾರ ಅಗತ್ಯ

ಕ್ಷಯರೋಗ ಚಾಂಪಿಯನ್ಸ್‌ಗಳ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:34 IST
Last Updated 25 ಡಿಸೆಂಬರ್ 2019, 12:34 IST
ಕೊಪ್ಪಳ ಬಿ.ಎಸ್‌.ಪವಾರ ಹೊಟೇಲ್‌ನಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಮಾತನಾಡಿದರು
ಕೊಪ್ಪಳ ಬಿ.ಎಸ್‌.ಪವಾರ ಹೊಟೇಲ್‌ನಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಮಾತನಾಡಿದರು   

ಕೊಪ್ಪಳ: ಜಿಲ್ಲೆಯಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ ಸಾರ್ವಜನಿಕರು, ಕುಟುಂಬಸ್ಥರು, ಆಶಾ ಕಾರ್ಯಕರ್ತೆಯರು ಹಾಗೂ ಟಿ.ಬಿ ಚಾಂಪಿಯನ್ಸ್‌ಗಳು ಕ್ಷಯ ರೋಗಿಗಳಿಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಲು ಸಹಕರಿಸಿ, ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಹೇಳಿದರು.

ನಗರದ ಬಿ.ಎಸ್‌.ಪವಾರ ಸಭಾಂಗಣದಲ್ಲಿಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಸಂವರ್ಧನ ಪ್ರತಿಷ್ಠಾನ(ರಿ) ಆಶ್ರಯದಲ್ಲಿ ಕ್ಷಯರೋಗ ನಿಯಂತ್ರಣದಲ್ಲಿ ಟಿ.ಬಿ.ಚಾಂಪಿಯನ್ಸ್‌ಗಳ ಪಾತ್ರ ಎಂಬ ವಿಷಯದ ಕುರಿತು ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 2,372 ಕ್ಷಯರೋಗಿಗಳನ್ನು ಗುರುತಿಸಲಾಗಿದ್ದು, 9 ಪಾಸಿಟಿವ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಕ್ಷಯರೋಗಿಗಳಿಗೆ ನೈತಿಕತೆಯಿಂದ ಆತ್ಮಸ್ಥೈರ್ಯ ಮೂಡಿಸಿ, ಚಿಕಿತ್ಸೆ ಪಡೆಯುವಂತೆ ಉತ್ತೇಜಿಸಬೇಕು. ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕ್ಷಯರೋಗಿಗಳಿಗೆ ಮೊಬೈಲ್ ಎಕ್ಸ್-ರೇ ಅಭಿಯಾನ ಜಾರಿಗೊಳಿಸಲು ಜಿಲ್ಲಾಡಳಿತ ಮಂಜೂರಾತಿ ನೀಡಿದೆ. ಈ ಪ್ರಯತ್ನ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಜಿಲ್ಲೆಗಳಿಗೆ ಮಾದರಿ ಆಗಲಿದೆ ಎಂದರು.

ADVERTISEMENT

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಜಿ ಮಹೇಶ್ ಮಾತನಾಡಿ, ಟಿ.ಬಿ ರೋಗಿಗಳು ಚಿಕಿತ್ಸೆ ತೆಗೆದುಕೊಂಡು ಗುಣಮುಖ ಹೊಂದಿದವರನ್ನು ಟಿ.ಬಿ ಚಾಂಪಿಯನ್ಸ್‌ಗಳು ಎಂದು ಗುರುತಿಸಲಾಗಿದ್ದು, ಟಿ.ಬಿ ರೋಗಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಟಿ.ಬಿ ಚಾಂಪಿಯನ್ಸ್‌ಗಳ ಪಾತ್ರ ಪ್ರಮುಖವಾಗಿದೆ. ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಕ್ಷಯರೋಗಿಗಳು ಮುಂಜಾಗೃತೆಯಿಂದ ಕರವಸ್ತ್ರಗಳನ್ನು ಬಳಸಬೇಕು ಎಂದು ಹೇಳಿದರು.

ಪದೆ, ಪದೇ ಕೆಮ್ಮು ಬಂದಲ್ಲಿ ಮಾಸ್ಕ್ ಧರಿಸುವುದನ್ನು ರೂಡಿಸಿಕೊಳ್ಳಬೇಕು. ಕ್ಷಯರೋಗಿಗಳನ್ನು ಗುರುತಿಸಿ, ಆರು ತಿಂಗಳ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯುವಲ್ಲಿ 100ರಲ್ಲಿ 90 ಜನ ವಿಫಲರಾಗುತ್ತಿದ್ದು, ಅಡ್ಡಪರಿಣಾಮಗಳು ಕಂಡುಬಂದಲ್ಲಿ ಚಿಕಿತ್ಸೆ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆಯುವಂತೆ ಮಾಡಬೇಕು. ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಜಾಥಾ, ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು, 2025ಕ್ಕೆಕ್ಷಯ ಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದರು.

ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ(ರಿ) ಅಧ್ಯಕ್ಷ, ತರಬೇತುದಾರ ಸುರೇಶ ಚಿತ್ರಾಪುರ ಮಾತನಾಡಿದರು.ಸಂಯೋಜಕ ಡಾ.ರಾಘವೆಂದ್ರ, ನೋಡಲ್ ಅಧಿಕಾರಿ ಡಾ.ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.