ಹುಲಿಗಿ (ಕೊಪ್ಪಳ): ಕಣ್ಣೆದುರು ವಿಶಾಲವಾಗಿ ಹರಿಯುತ್ತಿದ್ದ ತುಂಗಭದ್ರಾ ನದಿಯ ವಿಹಂಗಮ ನೋಟ, ತರಹೇವಾರಿ ಹೂಗಳಲ್ಲಿ ಅಲಂಕೃತವಾಗಿ ಕುಳಿತಿದ್ದ ಹುಲಿಗೆಮ್ಮ ದೇವಿಯ ಮೂರ್ತಿ, ನದಿಯ ಮಧ್ಯಭಾಗದಿಂದ ಪುಟಿದೇಳುತ್ತಿದ್ದ ಬಾಣಬಿರುಸುಗಳ ಚಿತ್ತಾರ ಹಾಗೂ ನದಿಯ ನೀರಿನ ಮೇಲೆ ಚೆಲ್ಲಿದ ಆರತಿಯ ಚೆಂಬೆಳಕು.
ಉತ್ತರ ಕರ್ನಾಟಕದ ಶಕ್ತಿದೇವತೆ ಎಂದು ಹೆಸರಾದ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪದಲ್ಲಿ ಹರಿಯುವ ತುಂಗಭದ್ರಾ ನದಿ ಬಳಿ ಮಂಗಳವಾರ ಕಂಡುಬಂದ ದೃಶ್ಯಾವಳಿಗಳು ಇವು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಇಲ್ಲಿನ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೊದಲ ಬಾರಿಗೆ ನಡೆದ ತುಂಗಭದ್ರಾ ಆರತಿ ಜನರ ಮನಸೂರೆಗೊಂಡಿತು.
ಝುಳುಝುಳು ಎಂದು ಹರಿಯುತ್ತಿದ್ದ ನೀರಿನ ಶಬ್ದ , ಅಲೆಗಳ ಸೊಬಗು, ಸಮೀಪದಲ್ಲಿರುವ ಹಳಿಯ ಮೇಲೆ ರೈಲು ಸಾಗುತ್ತಿರುವ ಚಿತ್ರಣದ ಜೊತೆಗೆ ಇಲ್ಲಿನ ಭಕ್ತರು ತುಂಗಭದ್ರಾ ಆರತಿಯ ವೈಭವವನ್ನು ಕಣ್ತುಂಬಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಸೇರಿದಂತೆ ಅನೇಕರು ಪೂಜೆ ಸಲ್ಲಿಸುವ ಮೂಲಕ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಶಿಯಲ್ಲಿ ಗಂಗಾ ಆರತಿ ನಡೆಸಿಕೊಡುವ 15 ಜನ ಅರ್ಚಕರು ಇಲ್ಲಿ ತುಂಗಭದ್ರಾ ಆರತಿ ನಡೆಸಿಕೊಟ್ಟಿದ್ದು ವಿಶೇಷ. ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಎರಡು ಸಾವಿರ ಆರತಿಗಳನ್ನು ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಸಾಕಷ್ಟು ಮಳೆ ಸುರಿದಿದ್ದರಿಂದ ಜನ ಪರದಾಡುವಂತಾಯಿತು.
ಸಂಜೆಯ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ದೇವಸ್ಥಾನದಲ್ಲಿ ಚಂಡಿಕಾ ಹೋಮ, ಅನ್ನ ಸಂತರ್ಪಣೆ, ಮಹಿಳೆಯರಿಂದ ಕುಂಭ ಮೆರೆವಣಿಗೆ, ನದಿತೀರದಲ್ಲಿ ದೇವಿಯ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿಶೇಷ ಪೂಜೆ ಜರುಗಿತು. ಮಹಿಳೆಯರಿಗೆ ಉಡಿ ತುಂಬುವುದು, ಹೊಸಪೇಟೆಯ ಅಂಜಲಿ ಕಲಾತಂಡದವರಿಂದ ಭರತನಾಟ್ಯ ಜರುಗಿದವು.
ಹುಲಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಗವಿಸಿದ್ದಪ್ಪ ಗುಂಗಾಡಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ್ ವಿಠ್ಠಲ ಚಾಗುಲಾ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಚ್. ಪ್ರಕಾಶರಾವ್ ಪಾಲ್ಗೊಂಡಿದ್ದರು.ಮೊದಲ ಬಾರಿಗೆ ನಡೆದ ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಅದ್ದೂರಿ ಸ್ಪಂದನೆ ವ್ಯಕ್ತವಾಗಿದ್ದು ಮಳೆಯೂ ಬಿಡುವು ನೀಡಿತು. ಪ್ರತಿವರ್ಷವೂ ಆಚರಿಸಲಾಗುವುದು
ತುಂಗಭದ್ರಾ ಆರತಿ ಕಾರ್ಯಕ್ರಮ ಮಾದರಿಯಾಗಿ ನಡೆದಿದ್ದು ಕಾಶಿಗೆ ಹೋಗಲಾಗದ ಭಕ್ತರು ಇದ್ದೂರಿನಲ್ಲಿಯೇ ನದಿತಟದ ಸೊಬಗು ಕಣ್ತುಂಬಿಕೊಂಡರು.ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ
ಮೊದಲ ಬಾರಿಗೆ ನಡೆದ ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಅದ್ದೂರಿ ಸ್ಪಂದನೆ ವ್ಯಕ್ತವಾಗಿದ್ದು ಮಳೆಯೂ ಬಿಡುವು ನೀಡಿತು. ಪ್ರತಿವರ್ಷವೂ ಆಚರಿಸಲಾಗುವುದುರಾಜಶೇಖರ ಹಿಟ್ನಾಳ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.