ADVERTISEMENT

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:17 IST
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರಸ್ಟ್‌ಗೇಟ್‌ನ ಭಾಗ ತೆರವು ಮಾಡಲು ನಡೆದ ಕಾರ್ಯಾಚರಣೆಯ ನೋಟ 
ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರಸ್ಟ್‌ಗೇಟ್‌ನ ಭಾಗ ತೆರವು ಮಾಡಲು ನಡೆದ ಕಾರ್ಯಾಚರಣೆಯ ನೋಟ     
ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಜನರಿಗೆ ಕೃಷಿಗೆ ಮತ್ತು ಕುಡಿಯುವ ನೀರಿಗೆ ಜೀವನಾಡಿ ಎನಿಸಿರುವ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆ ಆರಂಭವಾಗಿದ್ದು ನೀರಿನೊಂದಿಗಿನ ಈ ಸಾಹಸಮಯ ಕೆಲಸ ಕೌತುಕ ಮೂಡಿಸಿದೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರದ್ದು ದುಸ್ಸಾಹಸದ ಜಲಯಾನವೇ ಸರಿ. ಗೇಟ್‌ ಅಳವಡಿಸುವವರು ಯಾರು? ಯಾವ ರಾಜ್ಯದ ಪಾಲು ಎಷ್ಟು ಎನ್ನುವ ಪ್ರಶ್ನೆಗಳು ಕಾಡುತ್ತಿವೆ. ಈ ಕುರಿತು ಪ್ರಮೋದ ಕುಲಕರ್ಣಿ ಮಾಹಿತಿ ಒದಗಿಸಿದ್ದಾರೆ. 
ಜಲಾಶಯದ ಮೇಲ್ಭಾಗದ ಕವಚ ತೆರೆಯುವ ಕೆಲಸದ ಸಾಹಸ

ಗೇಟ್‌ ತಯಾರಿಕೆ ಕುರಿತು ಮಾಹಿತಿ

  • ತುಂಗಭದ್ರಾ ಆಣೆಕಟ್ಟಿನ ಸ್ಟಾಪ್‌ಲಾಗ್‌ ಅಂಶಗಳನ್ನು ತೆಗೆದುಹಾಕುವುದು ಹಾಗೂ 19ನೇ ಸ್ಟೀಲ್‌ ಗೇಟ್ ಅಳವಡಿಸುವ ಪ್ರಕ್ರಿಯೆ ಆರಂಭ.

  • ಗುಜರಾತ್‌ ರಾಜ್ಯದ ಅಹಮದಾಬಾದ್‌ನ ಹಾರ್ಡ್‌ವೇರ್‌ ಟೂಲ್ಸ್‌ ಮತ್ತು ಮೆಷೆನ್‌ ಪ್ರಾಜೆಕ್ಟ್‌ ಲಿಮಿಡೆಟ್‌ ಕಂಪನಿಗೆ ಗುತ್ತಿಗೆ ಪಡೆದುಕೊಂಡಿದೆ.

  • ಗುತ್ತಿಗೆದಾರ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡ ದಿನಾಂಕ: 10–06–2025

    ADVERTISEMENT
  • ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಲಾಗುತ್ತಿದ್ದು ಈಗಾಗಲೇ 14 ಗೇಟ್‌ಗಳ ತಯಾರಿಕಾ ಕೆಲಸ ಪೂರ್ಣಗೊಂಡಿದೆ.

  • ಗದಗ ಸಮೀಪದ ಅಡವಿಸೋಮಾಪುರದ ಯಾರ್ಡ್‌ನಲ್ಲಿ ಏಳು ಗೇಟ್‌ಗಳನ್ನು ತಯಾರಿಸಲಾಗಿದ್ದು ವಿಜಯನಗರ ಜಿಲ್ಲೆ ವ್ಯಾಪ್ತಿಯ ತುಂಗಭದ್ರಾ ಮಂಡಳಿ ಯಾರ್ಡ್‌ನಲ್ಲಿ 7 ಗೇಟ್‌ಗಳು ತಯಾರಾಗಿವೆ. ಇನ್ನುಳಿದ 18 ಕ್ರಸ್ಟ್‌ಗೇಟ್‌ಗಳ ತಯಾರಿಕೆಗೆ ಸಾಮಗ್ರಿ ಸಂಗ್ರಹಿಸಲಾಗಿದ್ದು 4 ಅಹಮದಾಬಾದ್‌ನಲ್ಲಿ ಗದಗನ ಯಾರ್ಡ್‌ನಲ್ಲಿ ನಾಲ್ಕು ಉಳಿದ ಏಳು ಗೇಟ್‌ಗಳನ್ನು ಟಿ.ಬಿ. ಬೋರ್ಡ್‌ ಯಾರ್ಡ್‌ನಲ್ಲಿ ತಯಾರಿಸಲು ಯೋಜನೆ ರೂಪಿಸಲಾಗಿದೆ.

  • ಜಲಾಶಯದಲ್ಲಿರುವ ಒಟ್ಟು ನೀರಿನಲ್ಲಿ 23 ಟಿಎಂಸಿ ಅಡಿಯಷ್ಟು ನೀರು ಬಳಕೆ ಮಾಡಲಾಗಿದ್ದು ಈ ಕ್ರಸ್ಟ್‌ಗೇಟ್‌ ಅಳವಡಿಸಲು 1613 ಅಡಿ ನೀರು ಇರಬೇಕು. 

  • ಗುತ್ತಿಗೆದಾರ ಕಂಪನಿಯ ಡಿ. 5ರಿಂದ ಗೇಟ್‌ ಮೇಲ್ಬಾಗದ ಕವಚ ತೆರೆಯುವ ಕಾರ್ಯ ಆರಂಭಿಸಿದ್ದು ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಡಿಸೆಂಬರ್‌ ಕೊನೆಯ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

  • ಗುತ್ತಿಗೆ ಪಡೆದ ಗುಜರಾತ್‌ನ  ಕಂಪನಿ ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್ ಕೆಆರ್‌ಎಸ್‌ ಜಲಾಶಯ ನಾರಾಯಣಪುರ ಡ್ಯಾಮ್‌ಗಳ ಗೇಟ್‌ ಅಳವಡಿಸಿದ ಅನುಭವ ಹೊಂದಿದೆ.

  • ಜಲಾಶಯದ ಎಡ ಬಲ ಮತ್ತು ಮಧ್ಯ ಭಾಗದಲ್ಲಿ ಒಂದು ಸೇರಿ ಒಟ್ಟು ಮೂರು ತಂಡಗಳಲ್ಲಿ ಗೇಟ್ ಅಳವಡಿಸುವ ಕಾರ್ಯ ನಡೆಯಲಿದೆ.

  • ಒಂದು ಗೇಟ್‌ ತೆರೆಯಲು ಹಾಗೂ ಅಳವಡಿಸಲು ತಲಾ ಏಳು ದಿನಗಳ ಸಮಯ ಬೇಕಾಗುತ್ತದೆ. 

ರೈತರ ತ್ಯಾಗಕ್ಕೆ ಬೆಲೆ ಕೊಡಬೇಕಿದೆ: ತಂಗಡಗಿ

ಜಲಾಶಯದ ಎರಡನೇ ಬೆಳೆಗೆ ನೀರು ಪಡೆದುಕೊಳ್ಳದೇ ರೈತರು ಮಾಡಿರುವ ತ್ಯಾಗಕ್ಕೆ ನಾವು ಬೆಲೆ ಕೊಡಬೇಕಿದೆ. ವಿವಿಧ ತಂಡಗಳಾಗಿ ಕೆಲಸ ನಿರ್ವಹಿಸಿ ಮೇ ಅಂತ್ಯದ ಒಳಗೆ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಗುತ್ತಿಗೆದಾರ ಕಂಪನಿಗೆ ಸೂಚಿಸಲಾಗಿದೆ. ಇದರ ಬಗ್ಗೆ ತೀವ್ರ ನಿಗಾ ವಹಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತಿ ಮತ್ತು ಟಿ.ಬಿ. ಮಂಡಳಿ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ

19ನೇ ಗೇಟ್‌ ಕಳಚಿದ ಬಳಿಕ ಮುನ್ನಲೆಗೆ ಬಂದ ಪ್ರಯತ್ನ

2024ರ ಆಗಸ್ಟ್‌ 10ರಂದು ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಅಪಾರ ಪ್ರಮಾಣದ ನೀರು ನದಿಯ ಪಾಲಾಗಿತ್ತು. ನೀರು ಹಿಡಿಯುವ ಸಾಮರ್ಥ್ಯ ಕಳೆದುಕೊಂಡಿದ್ದ ಗೇಟ್‌ನ ಕೊಂಡಿ ಕಳಚಿತ್ತು.  ಆಗ ಶರವೇಗದಲ್ಲಿ ಕಾರ್ಯಾಚರಣೆ ನಡೆಸಿದ್ದ ರಾಜ್ಯ ಸರ್ಕಾರ ಒಂದು ವಾರದೊಳಗೆ ತಾತ್ಕಾಲಿಕವಾಗಿ ಸ್ಟಾಪ್‌ಲಾಗ್‌ ಗೇಟ್ ಅಳವಡಿಸಿತ್ತು. ಈ ಘಟನೆಯ ಬಳಿಕ ಜಲಾಶಯದ ಎಲ್ಲ ಗೇಟ್‌ಗಳು ಸಾಮರ್ಥ್ಯ ಕಳೆದುಕೊಂಡಿವೆ. 72 ವರ್ಷಗಳಷ್ಟು ಹಳೆಯದಾದ ಜಲಾಶಯದ ಗೇಟ್‌ಗಳನ್ನು ತುರ್ತಾಗಿ ಬದಲಿಸಬೇಕಾದ ಅಗತ್ಯವೂ ಇದೆ ಎಂದು ಜಲಾಶಯಗಳ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ಸಲಹೆ ನೀಡಿದ್ದರು. ಇದಾದ ಬಳಿಕ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆ ಆರಂಭಿಸಲು ಸಾಕಷ್ಟು ಒತ್ತಡವೂ ಬಂದ ಬಳಿಕ ಈಗ ಆ ಪ್ರಯತ್ನ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.