ADVERTISEMENT

ತುಂಗಾಭದ್ರ ಜಲಾಶಯ | 64 ಸಾಲು ಕಂಬಗಳ ಮಂಟಪ ಭಾಗಶಃ ಮುಳುಗಡೆ

ತುಂಗಾಭದ್ರ ಜಲಾಶಯದಿಂದ ನದಿಗೆ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:46 IST
Last Updated 4 ಜುಲೈ 2025, 13:46 IST
ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಗಂಗಾವತಿ ತಾಲ್ಲೂಕಿನ ಕಂಪ್ಲಿ ಸೇತುವೆ ಮುಳುಗುವ ಹಂತದಲ್ಲಿರುವುದು
ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಗಂಗಾವತಿ ತಾಲ್ಲೂಕಿನ ಕಂಪ್ಲಿ ಸೇತುವೆ ಮುಳುಗುವ ಹಂತದಲ್ಲಿರುವುದು   

ಗಂಗಾವತಿ: ತುಂಗಾಭದ್ರ ಜಲಾಶಯದಿಂದ ನದಿಗೆ ಶುಕ್ರವಾರ 65 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದ್ದು, 64 ಸಾಲು ಕಂಬಗಳ ಮಂಟಪ ಭಾಗಶಃ ಮುಳುಗಡೆ ಆಗಿದೆ. ಅಲ್ಲದೆ ತಾಲ್ಲೂಕಿನ ವಿರೂಪಾಪುರಗಡ್ಡೆ, ನವವೃಂದಾವನಗಡ್ಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಆನೆಗೊಂದಿ ಭಾಗದ ಕೆಲ ದೇವಾಲಯ, ಮಂಟಪಗಳಿಗೆ ನೀರು ನುಗ್ಗಿದೆ.

ಜಲಾಶಯದ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ಗಂಗಾವತಿ-ಕಂಪ್ಲಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೆಳ ಭಾಗದಲ್ಲಿ ನೀರು ಹರಿಯುತ್ತಿದ್ದು, ಮುಳುಗಡೆ ಹಂತದಲ್ಲಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿಲ್ಲ. ಕಳೆದ 2 ದಿನಗಳಿಂದ ನದಿಗೆ ನೀರು ಬಿಡುವ ಬಗ್ಗೆ ತುಂಗಾಭದ್ರಾ ಜಲಾಶಯದಿಂದ ಎಚ್ಚರಿಕೆ ಸಂದೇಶ ಬಂದಿದೆ. ಹೀಗಾಗಿ ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ ನದಿಪಾತ್ರದ ಸ್ಥಳಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಕಳೆದ ವರ್ಷ ತುಂಗಾಭದ್ರ ಜಲಾಶಯದ 19ನೇ ಕ್ರಸ್ಟ್ ಗೇಟ್ ಒಡೆದು ಅಪಾರ ನೀರು ಹೊರಹೋಗಿ, ಜಲಾಶಯಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿತ್ತು. ತಜ್ಞರ ಕಾರ್ಯದಿಂದ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಸಿ, ಅಪಾಯ ತಪ್ಪಿಸಲಾಗಿತ್ತು.

ADVERTISEMENT

ನಂತರ ಜಲಾಶಯದ ಸುರಕ್ಷತೆ ಪರಿಶೀಲಿಸಿದಾಗ ಬಹುತೇಕ ಕ್ರಸ್ಟ್‌ಗೇಟ್‌ಗಳು ಶಿಥಿಲವಾದ ಸ್ಥಿತಿಯಲ್ಲಿದ್ದು, ಅವುಗಳನ್ನು ಬದಲಾಯಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದು, ಮುಂಬರುವ ವರ್ಷದಲ್ಲಿ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸಲು ಈ ಬಾರಿ ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಿ, ಉಳಿದ ನೀರು ಹೊರಬಿಡಲು ತುಂಗಾಭದ್ರಾ ಜಲಾಶಯದ ಆಡಳಿತ ಮಂಡಳಿ ನಿರ್ಧರಿಸಿದೆ.

ಆನೆಗೊಂದಿ ಗ್ರಾಮದ 64 ಸಾಲು ಕಂಬಗಳ ಮಂಟಪ ನೀರಿನಲ್ಲಿ ಭಾಗಶಃ ಮುಳಗಡೆ ಆಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.