ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ ಸೋಮವಾರ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದಾಗಿ ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ, ಚಿಂತಾಮಣಿ ಬಳಿಯ ಮಂಟಪ ಜಲಾವೃತವಾಗಿವೆ.
ತುಂಗಾಭದ್ರ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ ಕಾರಣ ನದಿಗೆ 80 ರಿಂದ 1.15 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಸಾಣಾಪುರ, ಹನುಮನಹಳ್ಳಿ, ಚಿಕ್ಕಜಂತಕಲ್ ಭಾಗದ ಕೆಲ ಭತ್ತ ಮತ್ತು ಬಾಳೆ ತೋಟಗಳಿಗೆ ನೀರು ನುಗ್ಗಿದೆ.
ನೀರು ಬಿಡುಗಡೆಯಿಂದ ನದಿಯಲ್ಲಿ ನೀರಿನ ರಭಸ, ಪ್ರಕೃತಿಯ ರಮಣೀಯ ನೋಟ ದೂರದಿಂದ ಕಣ್ತುಂಬಿಕೊಳ್ಳುವುದನ್ನು ಬಿಟ್ಟು ಯುವಜನರು ನದಿಪಾತ್ರಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಇಳಿದು ಪ್ರಾಣದ ಜೊತೆ ಚೆಲ್ಲಾಟವಾಡುತ್ತಾರೆ.
ರಜೆಯ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ತಾಲ್ಲೂಕಿನ ಸಾಣಾಪುರ ಗ್ರಾಮದ ಜಲಪಾತ, ಸಾಣಾಪುರ ಕೆರೆ, ಖಾಸಗಿ ರೆಸಾರ್ಟ್ ಹಿಂಬದಿಯ ನದಿಪಾತ್ರ, ಚಿಂತಾಮಣಿ ಬಳಿ ನೀರಿಗೆ ಇಳಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.
ಸಾಣಾಪುರ ಗ್ರಾಮದ ಜಲಪಾತ, ಕೆರೆಯಲ್ಲಿ ಈಜಾಡಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತೆರಳಿ ಕಾಲು ಜಾರಿ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದಾಗ ಮಾತ್ರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಗ್ರಾ.ಪಂ ಸಿಬ್ಬಂದಿ ತುಸು ಭದ್ರತೆ ಒದಗಿಸುತ್ತಾರೆ. ದಿನ ಕಳೆದಂತೆ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ.
ಕಳೆದ ತಿಂಗಳು ಗಂಗಾವತಿಯ ಸಿದ್ದಿಕೇರಿ ಬಳಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ತೆರಳಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಾಲಕಿಯೊಬ್ಬರು ನೀರಿನ ಪೈಪ್ ಮೇಲೆ ನಡೆಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಸದ್ಯ ತಾಲ್ಲೂಕಿನಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ನದಿಪಾತ್ರದಲ್ಲಿ ಈವರೆಗೂ ಭದ್ರತೆಗೆ ಕ್ರಮ ಕೈಗೊಳ್ಳುತ್ತಿಲ್ಲ.
ತಾಲ್ಲೂಕಿನ ಹನುಮನಹಳ್ಳಿ, ಪಂಪಾಸರೋವರ, ಆನೆಗೊಂದಿ ತಳವಾರಘಟ್ಟ, ಚಿಂತಾಮಣಿ, ನವಬೃಂದಾವನಕ್ಕೆ ತೆರಳುವ ಸ್ಥಳ, ದೇವಘಾಟ್ ಬಳಿಯ ನದಿಪಾತ್ರದಲ್ಲಿ ಯುವಕರು ಸೆಲ್ಫಿ ತೆಗೆದುಕೊಳ್ಳುವುದು, ಮೀನು ಹಿಡಿಯುವುದನ್ನು ಮಾಡುತ್ತಾರೆ. ಅವರಿಗೆ ಎಚ್ಚರಿಕೆ ನೀಡುವ ಕೆಲಸ ಮಾತ್ರ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.