ADVERTISEMENT

ನದಿ ರಕ್ಷಣೆಗೆ ಜನಶಕ್ತಿಯೇ ಮುಂದಾಗಬೇಕು: ರಾಜಶ್ರೀ ಚೌಧರಿ

ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:01 IST
Last Updated 29 ಡಿಸೆಂಬರ್ 2025, 6:01 IST
ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲ ಜಾಗೃತಿ- ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆಗೆ ಆಂದೋಲನದ ರಾಷ್ಟ್ರೀಯ ಸಂಯೋಜಕಿ ರಾಜಶ್ರೀ ಚೌಧರಿ ಉದ್ಘಾಟಿಸಿದರು
ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲ ಜಾಗೃತಿ- ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆಗೆ ಆಂದೋಲನದ ರಾಷ್ಟ್ರೀಯ ಸಂಯೋಜಕಿ ರಾಜಶ್ರೀ ಚೌಧರಿ ಉದ್ಘಾಟಿಸಿದರು   

ಕಾರಟಗಿ:‌ ‘ತುಂಗಭದ್ರಾ ನದಿ ನೀರಿನ ಸಿಹಿ ಗುಣದಿಂದಾಗಿ ತುಂಗಾ ಪಾನವೆಂಬ ಮಾತು ರಾಷ್ಟ್ರದಲ್ಲೇ ಪ್ರಖ್ಯಾತಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ನದಿ ಕಲುಷಿತಗೊಂಡಿದೆ. ನೀರು ಕುಡಿಯಲೂ ಯೋಗ್ಯವಲ್ಲ ಎಂಬ ವರದಿ ತೀವ್ರ ಕಳವಳ ಮೂಡಿಸುವಂತಿದೆ’ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಹಾಗೂ ಸ್ಥಳೀಯ ಜಾಗೃತ ಯುವಕ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ 3ನೇ ಹಂತದ ಜಲ ಜಾಗೃತಿ- ಜನ ಜಾಗೃತಿ ಪಾದಯಾತ್ರೆಯ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೀರಿನ ಸೇವನೆಯಿಂದ ಮಾರಣಾಂತಿಕ ಖಾಯಿಲೆಗಳ ಅಪಾಯ ಎದುರಾಗಿದೆ. ನಾವೆಲ್ಲಾ ಎಚ್ಚರಗೊಳ್ಳದಿದ್ದರೆ ಭವಿಷ್ಯದ ಪೀಳಿಗೆಯು ಭಾರಿ ಅಪಾಯವನ್ನು ಎದುರಿಸಬೇಕಾಗುವುದು. ಕಾರ್ಖಾನೆಗಳ ವಿಷಕಾರಿ, ತ್ಯಾಜ್ಯ ನೀರಿನ ವಿಚಾರದಲ್ಲಿ ನದಿ ಸಂರಕ್ಷಣೆ ಹಾಗೂ ವಾಯುಮಂಡಲ ರಕ್ಷಣೆಗೆ ಸರ್ಕಾರಗಳ ಬಳಿ ಕಠಿಣ ನೀತಿಗಳೇ ಇಲ್ಲದಿರುವುದು ಆಶ್ಚರ್ಯಕರ ಸಂಗತಿ’ ಎಂದರು.

ADVERTISEMENT

‘ಮುಂದಿನ ಪೀಳಿಗೆಗಾಗಿ ನದಿಯ ಪರಿಶುದ್ದತೆಗೆ ಎಲ್ಲರೂ ಒಂದಾಗಿ ಸರ್ಕಾರದ ಗಮನ ಸೆಳೆಯಬೇಕಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳು ಮತ್ತಷ್ಟು ಆತಂಕಕಾರಿಯಾಗಲಿವೆ’ ಎಂದರು.

ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ‘ನದಿ ಹಾಗೂ ನೀರು ರಕ್ಷಣೆಗೆ ಭೇದ-ಭಾವವಿಲ್ಲದೇ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಮುಂದಾದಾಗ ಜೀವಸಂಕುಲದ ಹಾಗೂ ನಮ್ಮ ಉಳಿವು ಸಾಧ್ಯವಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಜೀವ ಸಂಕುಲ ನಾಶವಾಗುವುದಲ್ಲದೆ, ಮನುಷ್ಯರೂ ಅವನತಿಯತ್ತ ಸಾಗಬೇಕಾಗುತ್ತದೆ’ ಎಂದರು.

ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೇಲ್, ಪ್ರಚಾರ ರಾಯಭಾರಿ ಲಲಿತಾರಾಣಿ ಶ್ರೀರಂಗದೇವರಾಯುಲು, ಪ್ರಮುಖರಾದ ಗಿರಿರಾಜ್ ಗುಪ್ತಾ, ಜಾಗೃತ ಯುವಕ ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿದರು.

ನಾಗರಾಜ ತಂಗಡಗಿ, ಸಿ.ಪಿ. ಮಾಧವನ್, ಲೋಕೇಶ್ವರಪ್ಪ, ಮರುಳಸಿದ್ದಯ್ಯಸ್ವಾಮಿ ಹಿರೇಮಠ, ವೀರಭದ್ರ ಶರಣರು ತಲೇಖಾನಮಠ, ಅಭಿಯಾನದ ಸಂಚಾಲಕರಾದ ಶಿವಕುಮಾರ್ ಮಾಲಿಪಾಟೀಲ್, ಪ್ರಭು ಉಪನಾಳ, ಬಸವರಾಜ ಶೆಟ್ಟರ್, ಚನ್ನಬಸಪ್ಪ ಸುಂಕದ, ಪ್ರಹ್ಲಾದ ಜೋಷಿ, ಶರಣಪ್ಪ ಕಾಯಿಗಡ್ಡೆ, ಜಿ. ಯಂಕನಗೌಡ, ರೈತ ಮುಖಂಡರಾದ ನಾರಾಯಣ ಈಡಿಗೇರ, ವೀರನಗೌಡ, ಮರಿಯಪ್ಪ ಸಾಲೋಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.