ADVERTISEMENT

ಕುಷ್ಟಗಿಯಲ್ಲಿ ಇಬ್ಬರ ಕೋವಿಡ್‌ ಸೋಂಕಿತರ ಸಾವು

ಕೋವಿಡ್: ಕೋವ್ಯಾಕ್ಸಿನ್‌ಗೆ ಹೆಚ್ಚಿದ ಬೇಡಿಕೆ, 2ನೇ ಡೋಸ್‌ ಮಾತ್ರ ಲಭ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2021, 4:59 IST
Last Updated 14 ಮೇ 2021, 4:59 IST
ಶಾಮೀದಸಾಬ್
ಶಾಮೀದಸಾಬ್   

ಕುಷ್ಟಗಿ: ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಪಟ್ಟಣದ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ.

ಲೋಕೋಪಯೋಗಿ ಉಪ ವಿಭಾಗದಲ್ಲಿನ ನಿವೃತ್ತ ನೌಕರ ಸಯ್ಯದ್‌ ಶಾಮೀದಸಾಬ್ (61) ಪಟ್ಟಣದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಗುರುವಾರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಪಟ್ಟಣದ ಹೊರವಲಯದ ಖಬರಸ್ತಾನ್‌ದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ADVERTISEMENT

ಹನುಮಸಾಗರ ಮೂಲದ ಇಲ್ಲಿಯ ನಿವಾಸಿ ಈಶಾನ್ಯ ಸಾರಿಗೆ ಸಂಸ್ಥೆ ನೌಕರ ತುಕಾರಾಮ ಹುಲಮನಿ (59) ನಿಧನರಾಗಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಎರಡು ವಾರಗಳಿಂದ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು.

ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ನಿಧನರಾಗಿದ್ದು ಬಾಗಲಕೋಟೆಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿಸಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

50 ಜನ ಸೋಂಕಿತರು: ತಾಲ್ಲೂಕಿನಲ್ಲಿ 50 ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿವೆ. ಪಟ್ಟಣದಲ್ಲಿ 13 ಜನರಿಗೆ ಹೊಸದಾಗಿ ಕೋವಿಡ್‌ ಸೋಂಕು ತಗುಲಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು ತಿಳಿಸಿದರು.

ಲಸಿಕೆ: ಕೋವ್ಯಾಕ್ಸಿನ್‌ ಲಸಿಕೆಗಾಗಿ 18 ವರ್ಷ ಮೇಲ್ಪಟ್ಟ ಬಹಳಷ್ಟು ಜನರು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಶುಕ್ರವಾರ (ಮೇ 14) ದಿಂದ ಕೇವಲ ಎರಡನೇ ಡೋಸ್‌ ಹಾಕಿಸಿಕೊಳ್ಳುವವರಿಗೆ ಮಾತ್ರ ಲಸಿಕೆ ಹಾಕುವಂತೆ ಮೇಲಧಿಕಾರಿಗಳಿಂದ ಆರೋಗ್ಯ ಸಿಬ್ಬಂದಿಗೆ ಸೂಚನೆ ಬಂದಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.