ಕೊಪ್ಪಳ: ‘ಜಿಲ್ಲೆಯಲ್ಲಿ ರಸಗೊಬ್ಬರ ಅಂಗಡಿಗಳ ಮಾಲೀಕರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮತ್ತು ಅನಧಿಕೃತವಾಗಿ ದಾಸ್ತಾನು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಎಚ್ಚರಿಕೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ತಯಾರಿಕೆ ಕಂಪನಿಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಕರ್ನಾಟಕ ಮಾರ್ಕೆಟಿಂಗ್ ಫೆಡರೇಷನ್, ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ರಸಗೊಬ್ಬರ, ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷರ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ರಸಗೊಬ್ಬರದ ಜೊತೆಗೆ ಜೈವಿಕ ಉತ್ತೇಜಕಗಳು, ಕೀಟನಾಶಕ ಹಾಗೂ ಉಪ ಪೋಷಕಾಂಶಗಳನ್ನು ಲಿಂಕ್ ಮಾಡಬಾರದು. ನಿಯಮಾನುಸಾರವೇ ಅವುಗಳ ಮಾರಾಟ ಮಾಡಬೇಕು. ಕನಕಗಿರಿ, ಕಾರಟಗಿ ಹಾಗೂ ಕುಷ್ಟಗಿ ಭಾಗಕ್ಕೆ ಭೇಟಿ ನೀಡಿದಾಗ ಹೆಚ್ಚಿನ ಹಣ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದವು’ ಎಂದರು.
‘ನ್ಯಾನೊ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಬಳಕೆಗೆ ರೈತರು ಒತ್ತು ಕೊಡಬೇಕು. ಈ ಕುರಿತು ರಸಗೊಬ್ಬರ ಕಂಪನಿಯಗಳು ಕೃಷಿ ಇಲಾಖೆಯ ಜೊತೆಗೂಡಿ ರೈತರಿಗೆ ಮಾಹಿತಿ, ಪ್ರಾತ್ಯಕ್ಷಿಕೆ ಏರ್ಪಡಿಸಬೇಕು’ ಎಂದು ಹೇಳಿದರು.
4702 ಮೆಟ್ರಿಕ್ ಟನ್ ದಾಸ್ತಾನು ಲಭ್ಯ
ಕೊಪ್ಪಳ: ಜಿಲ್ಲೆಯಲ್ಲಿ ಗುರಿಗಿಂತಲೂ ಹೆಚ್ಚು ಯೂರಿಯಾ ರಸಗೊಬ್ಬರ ಬಂದಿದ್ದು 4702 ಮೆಟ್ರಿಕ್ ಟನ್ ದಾಸ್ತಾನು ಲಭ್ಯ ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದ್ದಾರೆ. ‘ರಸಗೊಬ್ಬರ ನಿಯಮ ಮೀರಿ ಮಾರಾಟ ಮಾಡಿದರೆ ಸಹಾಯಕ ಕೃಷಿ ನಿರ್ದೇಶಕರಾದ ಜೀವನಸಾಬ (ಕೊಪ್ಪಳ) 8277922143 ನಾಗರಾಜ ಕಾತರಕಿ (ಕುಷ್ಟಗಿ) 8277922109 ಪ್ರಮೋದ ತುಂಬಾಳ (ಯಲಬುರ್ಗಾ) 8277922107 ಸಂತೋಷ ಪಟ್ಟದಕಲ್ (ಗಂಗಾವತಿ) 8277922106 ಸುನೀಲ್ ಕುಮಾರ ಎಂ. ಟಿ. (ಜಾರಿದಳ) ಕೊಪ್ಪಳ 8277932117 ಅವರನ್ನು ಸಂಪರ್ಕಿಸಬಹುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.