ADVERTISEMENT

ವಿಚಾರಣಾಧೀನ ಕೈದಿಗಳ ತ್ಯಾಗಕ್ಕೆ ಶ್ಲಾಘನೆ

ಪತ್ರ ಬರೆದು ಅಭಿನಂದನೆ ಸಲ್ಲಿಸಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:50 IST
Last Updated 18 ಜನವರಿ 2026, 4:50 IST
ಕೊಪ್ಪಳದ ಗವಿಮಠದಲ್ಲಿ ಶನಿವಾರ ಕಂಡುಬಂದ ಜನಸಂದಣಿ
ಕೊಪ್ಪಳದ ಗವಿಮಠದಲ್ಲಿ ಶನಿವಾರ ಕಂಡುಬಂದ ಜನಸಂದಣಿ   

ಕೊಪ್ಪಳ: ಇಲ್ಲಿನ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳು ತಮ್ಮ ಒಪ್ಪೊತ್ತಿನ ಉಪಾಹಾರ ತ್ಯಾಗ ಮಾಡಿ ಆ ಆಹಾರ ಸಾಮಗ್ರಿಯನ್ನು ಗವಿಮಠದ ಮಹಾದಾಸೋಹಕ್ಕೆ ನೀಡಿದ ಕಾರ್ಯಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪತ್ರಬರೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

‘ಮಾನವನೆದೆಯಲಿ ಆರದೆ ಬೆಳಗಲಿ ದೇವರು ಹಚ್ಚಿದ ದೀಪ, ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ ಕೆನ್ನೆಯ ಸವರುವ ಪ್ರೀತಿ, ಲಾವಾರಸವನ್ನು ಕಾರುವ ಧರೆಯೇ ನೀಡದೆ ಅನ್ನದ ಬೆಳೆಯ? ಎಂಬ ಕವಿಯವಾಣಿಯಂತೆ ಪ್ರತಿಯೊಬ್ಬ ಮನುಷ್ಯರಲ್ಲಿಯೂ ಸತ್ವ, ರಜ, ತಮೊ ಗುಣಗಳು ಹರಿಯುತ್ತವೆ. ತಮೊ ಗುಣಗಳು ಹರಿದಾಗ ಪಾಪಾತ್ಮನಾಗುತ್ತಾನೆ. ಸತ್ವ ಗುಣಗಳು ಹರಿದಾಗ ಪುಣ್ಯಾತ್ಮನಾಗುತ್ತಾನೆ; ಅದರಂತೆ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳು ಸ್ವ ಇಚ್ಛೆಯಿಂದ ಉಪಾಹಾರ ಮಾಡದೆ ಅದರ ಸಂಪೂರ್ಣ ವೆಚ್ಚದ ಹಣವನ್ನು ಉಳಿಸಿ ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ದೇಣಿಗೆ ನೀಡಿದ್ದಾರೆ ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಜ. 4ರಂದು ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು.

ಜನಜಂಗುಳಿ: ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಮುಗಿದು 12 ದಿನಗಳಾದರೂ ಗವಿಮಠಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅದರಲ್ಲಿಯೂ ವಾರಾಂತ್ಯದ ದಿನಗಳಂದು ಜನಜಂಗುಳಿ ಕಂಡುಬರುತ್ತಿದೆ.

ADVERTISEMENT

ಜ. 5ರಂದು ಮಹಾರಥೋತ್ಸವ ನಡೆದಿತ್ತು. ಭಾನುವಾರದ ಅಮವಾಸ್ಯೆ ತನಕ ಮಠದಿಂದ ಮಹಾದಾಸೋಹದ ವ್ಯವಸ್ಥೆ ಇರುತ್ತದೆ. ಎಳೆದ ತೇರನ್ನು ಮಠದ ಎದುರಿನ ಆವರಣದಲ್ಲಿ ಇರಿಸಲಾಗಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬರುತ್ತಿರುವ ಭಕ್ತರು ತೇರಿಗೆ ಕಾಯಿ ಒಡೆಯಿಸಿಕೊಂಡು, ಗದ್ದುಗೆ ಹಾಗೂ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ.  

ಭಕ್ತರ ಸಂಖ್ಯೆ ನಿರಂತರವಾದಷ್ಟೂ ಮಹಾದಾಸೋಹದ ಮನೆಯಲ್ಲಿ ಅಷ್ಟೇ ಉತ್ಸಾಹದಿಂದ ಒಲೆಗಳು ಉರಿಯುತ್ತಿವೆ. ಸ್ವಯಂಸೇವಕರು, ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್‌ ಹೀಗೆ ಅನೇಕರು ದಾಸೋಹದ ಮನೆ ಬಳಿ ಊಟಕ್ಕೆ ಬರುತ್ತಿರುವವರಿಗೆ ಜನಸಂದಣಿ ನಿಯಂತ್ರಿಸಿ ಸರಾಗ ವ್ಯವಸ್ಥೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಆಟಿಕೆಗಳ ಲೋಕ ಮಕ್ಕಳ ಮತ್ತು ಮಹಿಳೆಯರ ಆಕರ್ಷಣೆಯಾಗಿದೆ.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ವಿಚಾರಣಾಧೀನ ಕೈದಿಗಳು ಮನಪರಿವರ್ತನೆ ಮಾಡಿಕೊಂಡು ಮಾಡಿದ ಸೇವೆ ಅವರ ಅಂತಃಕರಣವನ್ನು ಶುಚಿಗೊಳಿಸಿದೆ. ಸನ್ಮಾರ್ಗದಲ್ಲಿ ನಡೆದು ಬದುಕು ಹಸನುಗೊಳಿಸಿಕೊಳ್ಳಲಿ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ

ಜ್ವರದ ನಡುವೆಯೂ ಸ್ವಾಮೀಜಿ ಭಕ್ತರ ಭೇಟಿ

ಕೊಪ್ಪಳ: ನಿರಂತರ ಓಡಾಟ ಮಠದಲ್ಲಿ ಪೂಜೆ ಭಕ್ತರಿಗೆ ದರ್ಶನ ಹಾಗೂ ಅನೇಕ ಕೆಲಸಗಳನ್ನು ನಿರ್ವಹಣೆ ಮಾಡುತ್ತಿರುವ ಸ್ವಾಮೀಜಿಗೆ ಜ್ವರ ಬಾಧಿಸುತ್ತಿದ್ದರೂ ಶನಿವಾರವೂ ಲಕ್ಷಾಂತರ ಭಕ್ತರನ್ನು ಭೇಟಿಯಾದರು. ಮಠದ ಮೇಲ್ಬಾಗದಲ್ಲಿ ಕುಳಿತಿದ್ದ ಅವರು ಬಂದ ಭಕ್ತರನ್ನು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಪ್ರಸಾದ ಸೇವಿಸಿಯೇ ತೆರಳುವಂತೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.