ಕನಕಗಿರಿ ತಾಲ್ಲೂಕಿನ ಕರಡೋಣ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಅಪೂರ್ಣಗೊಂಡ ಶೌಚಾಲಯ ಕಟ್ಟಡ
ಕನಕಗಿರಿ: ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಪಂಚಾಯಿತಿಯಾಗಿರುವ ಕರಡೋಣ ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ನಾಯಕ, ಹಿಂದುಳಿದ ವರ್ಗದ ಕುರುಬ, ಅಲ್ಪಸಂಖ್ಯಾತರು, ಲಿಂಗಾಯತರು ಸೇರಿದಂತೆ ಇತರೆ ಸಮುದಾಯದವರು ವಾಸಿಸುತ್ತಿದ್ದಾರೆ.
2009ರಲ್ಲಿ ಸುರಿದ ಧಾರಾಕಾರ ಮಳೆಗೆ ಮುಳುಗಡೆಯಾಗಿದ್ದ ಈ ಊರನ್ನು ಸ್ಥಳಾಂತರ ಮಾಡಿ ಅಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೊರತು ಪಡಿಸಿದರೆ ಶೌಚಾಲಯ, ಸಿಸಿ ರಸ್ತೆ, ಚರಂಡಿ, ಸ್ವಚ್ಛತೆ, ಇತರೆ ಸಮಸ್ಯೆಗಳನ್ನು ಬಗೆಹರಿಸಲು ಆಗುತ್ತಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಂಡ ಹೈಟೆಕ್ ಮಹಿಳಾ ಶೌಚಾಲಯ ಪೂರ್ಣಗೊಂಡಿಲ್ಲ. ಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿಲ್ಲ. ಕಳಪೆ ಗುಣಮಟ್ಟದ ರಾಡ್, ಸಿಮೆಂಟ್, ಬಳಸಿ ನಿರ್ಮಾಣ ಮಾಡಲಾಗಿದೆ,.
ಕಾಮಗಾರಿಗೆ ₹5 ಲಕ್ಷ ವೆಚ್ಚ ಮಾಡಿದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ ಎಂದು ಗ್ರಾಮದ ಬಿಜೆಪಿ ಪ್ರಮುಖರಾದ ವೀರಭದ್ರಪ್ಪ ಬುಡಕುಂಟಿ ಹಾಗೂ ಏಕಲವ್ಯ ಟೇಜಮರಿ ದೂರಿದರು.
ಸರ್ಕಾರಿ ಶಾಲೆಯ ಪರಿಸರದಲ್ಲಿ ₹25 ಲಕ್ಷ ಮೊತ್ತದಲ್ಲಿ ನಿರ್ಮಾಣ ಮಾಡಿರುವ ಹೈಟೆಕ್ ಶೌಚಾಲಯ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಶೌಚಾಲಯಕ್ಕೆ ಹೋಗಲು ರಸ್ತೆ ಇಲ್ಲವಾಗಿದೆ. ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಅನೇಕ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕಾಗಿ ನವಲಿ ಹಾಗೂ ಹಿರೇಖೇಡ ಹಾಗೂ ಇತರೆ ನಗರ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಗ್ರಾಮಕ್ಕೆ ಯಾವುದೇ ಪಕ್ಷದ ಶಾಸಕರೇ ಬರಲಿ ಪ್ರೌಢಶಾಲೆ ಮಂಜೂರು ಮಾಡುವುದಾಗಿ ಭರವಸೆ ಮಾತ್ರ ನೀಡುತ್ತಾರೆ. ಹದಿನೈದು ವರ್ಷಗಳಿಂದಲೂ ಇದೆ ಸಮಸ್ಯೆ ಇದೆ. ಬಾಲಕಿಯರನ್ನು ಬೇರೆ ಊರಿಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಗ್ರಾಮದಲ್ಲಿರುವ ಬಹುತೇಕ ಚರಂಡಿಗಳು ತುಂಬಿ ಗಬ್ಬು ನಾರುತ್ತಿವೆ. ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಕಾಡುತ್ತಿದೆ. ಚರಂಡಿ ತ್ಯಾಜ್ಯ ಎತ್ತುವಳಿ ಮಾಡಿ ಬೇರೆಡೆಗೆ ಸಾಗಿಸಲು ಮೀನಮೇಷ ಎಣಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅನುದಾನ ಇಲ್ಲ ಎಂಬ ಸಬೂಬು ಹೇಳುತ್ತಾರೆ ಎಂದು ದೂರಿದರು.
ದನ, ಕುರಿ ಇದ್ದವರು ಶೆಡ್ ನಿರ್ಮಾಣ ಮಾಡಿಕೊಳ್ಳುವುದಾಗಿ ಅರ್ಜಿ ಸಲ್ಲಿಸಿದವರಿಗೆ ಯೋಜನೆ ತಲುಪಿಲ್ಲ. ಆದರೆ ಅನರ್ಹರಿಗೆ ಸೌಲಭ್ಯ ನೀಡಲಾಗಿದೆ ಎಂದು ಚಿದಾನಂದ ಆರೋಪಿಸಿದರು.
ಹೊಸ ಕಾಮಗಾರಿಗೆ ಹಳೆ ಬಾಗಿಲು: ಆರೋಗ್ಯ ಸಹಾಯಕರ ಕಚೇರಿಯ ಹೊರಗೋಡೆ ಕಾಮಗಾರಿಗೆ ನರೇಗಾ ಯೋಜನೆ ಅನುದಾನ ಬಳಕೆ ಮಾಡಲಾಗಿದೆ. ಹಳೆ ಗೋಡೆಯ ಗೇಟ್ ಅನ್ನು ಹೊಸ ಕಾಮಗಾರಿಗೆ ಜೋಡಿಸಿ ಹಣ ಎತ್ತುವಳಿ ಮಾಡಲಾಗಿದೆ ಎಂದು ವೀರಭದ್ರಪ್ಪ ಬುಡಕುಂಟಿ ಆರೋಪಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊರತೆ ಇಲ್ಲ. ನೀರಿನ ತೊಟ್ಟಿಯಲ್ಲಿ ಪಾಚಿ ಬೆಳೆದಿದ್ದು, ನೀರು ಬಳಕೆ ಮಾಡಲು ಹಿಂದೇಟು ಹಾಕುವಂತಾಗಿದೆ. ಸ್ವಚ್ಛಗೊಳಿಸುವಂತೆ ಮನವಿ ಮಾಡಿಕೊಂಡರೆ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಆರೋಗ್ಯ ನಿರೀಕ್ಷಕಿ ನಿಯೋಜನೆ ಮೇಲೆ ಬೇರೆ ಊರಿಗೆ ಹೋದ ಪರಿಣಾಮ ಜನರಿಗೆ ತೊಂದರೆಯಾಗುತ್ತಿದೆ. ಗರ್ಭಿಣಿ ಮಹಿಳೆಯರು ಸೇರಿ ರೋಗಿಗಳು ಅನ್ಯ ಆಸ್ಪತ್ರೆಯನ್ನು ಅವಲಂಬಿಸುವಂತಾಗಿದೆ ಎಂದು ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರಿನ ಟ್ಯಾಂಕ್, ಬಿಸಿಯೂಟ ಕೊಠಡಿ, ಶೌಚಾಲಯ ಕಾಮಗಾರಿಗೆ ತಕ್ಕಂತೆ ನರೇಗಾ ಯೋಜನೆಯಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಆರೋಗ್ಯ ಕೇಂದ್ರದ ಹೊರಗೋಡೆ ಹಾಗೂ ಹೈಟೆಕ್ ಶೌಚಾಲಯ ಕಾಮಗಾರಿಗಳು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಸಲಾಗಿದೆ. ನರೇಗಾ ಯೋಜನೆಯ ಕೆಲ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಕೆಲಸಗಳನ್ನು ಪೂರ್ಣಗೊಳಿಸಲಾಗುವುದು. ಚರಂಡಿ ಹೂಳು ಎತ್ತುವುದು, ನೀರಿನ ತೊಟ್ಟಿ ಸ್ವಚ್ಛಗೊಳಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರೇಹನುಮಂತಪ್ಪ ಮಂದಲರ್
ಪ್ರತಿಕ್ರಿಯೆ ನೀಡಿದರು.
ಕಾಮಗಾರಿ ಸ್ಥಳವನ್ನು ಪರಿಶೀಲಿಸಿ ಬಿಲ್ ಪಾವತಿ ಮಾಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಪೂರ್ಣ ಹಣ ಬಿಡುಗಡೆ ಮಾಡಿಲ್ಲ ನಾಗಲಿಂಗಪ್ಪ ಪಿಡಿಒ ಕರಡೋಣ ನರೇಗಾ ಕಾಮಗಾರಿಗಳನ್ನು ನರೇಗಾ ಸಹಾಯಕ ನಿರ್ದೇಶಕರು ಹಾಗೂ ತಾಂತ್ರಿಕ ಸಂಯೋಜಕರು ಪರಿಶೀಲನೆ ಮಾಡಿದ ನಂತರ ಬಿಲ್ ಪಾವತಿಯಾಗುತ್ತದೆ. ಇಲ್ಲಿ ಕಳಪೆ ಗುಣಮಟ್ಟ ಎಂಬ ದೂರಿನಲ್ಲಿ ಹುರುಳಿಲ್ಲ ಹಿರೇ ಹನುಮಂತಪ್ಪ ಮಂದಲರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಡೋಣ ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ನಂತರ ಬಿಲ್ ಪಾವತಿ ಮಾಡಬೇಕು ಏಕಲವ್ಯ ಟೇಜಮಲಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.