ಕುಷ್ಟಗಿ: ತಾಲ್ಲೂಕಿನಾದ್ಯಂತ ಏಕಕಾಲಕ್ಕೆ ಉತ್ತಮ ಮಳೆ ಆಗಿರುವುದರಿಂದ ಸಹಜವಾಗಿ ಯೂರಿಯಾ ರಸಗೊಬ್ಬರಕ್ಕೆ ರೈತರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದಂತೆ ವಿವಾದ ಸೃಷ್ಟಿಯಾಗುತ್ತಿದೆ. ಗೊಬ್ಬರದ ಸಮಸ್ಯೆ ಉಲ್ಬಣಿಸುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡುವಂತಾಗಿದೆ.
ಕುಷ್ಟಗಿ ಹಾಗೂ ಸುತ್ತಲಿನ ತಾಲ್ಲೂಕುಗಳಲ್ಲಿಯೂ ಮಳೆಯಾಗಿರುವ ಕಾರಣಕ್ಕೆ ಪಟ್ಟಣದಲ್ಲಿ ಯೂರಿಯಾ ಗೊಬ್ಬರದ ಅಂಗಡಿಗಳ ಬಳಿ ರೈತರು ಠಿಕಾಣಿ ಹೂಡುವುದು, ನೂಕುನುಗ್ಗಲು, ಗದ್ದಲ ಉಂಟಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಶನಿವಾರ ದಿಢೀರ್ ಭೇಟಿ ನೀಡಿ ಇಲ್ಲಿಯ ಪರವಾನಗಿ ಪಡೆದು ಗೊಬ್ಬರ ವಿತರಿಸುವ ಖಾಸಗಿ ಮಳಿಗೆಗಳಲ್ಲಿ ಖುದ್ದಿ ಪರಿಶೀಲನೆ ನಡೆಸಿದ್ದು ಕಂಡುಬಂದಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ರೈತರು, ಅಂಗಡಿಯವರು ಯೂರಿಯಾ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಂಗಡಿಗಳಲ್ಲಿನ ದಾಸ್ತಾನು ಮತ್ತು ರೆಜಿಸ್ಟರ್‌ಗಳನ್ನು ಜಿಲ್ಲಾಧಿಕಾರಿ ಸ್ವತಃ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿತರಕರಿಗೆ ಸೂಚನೆ ನೀಡಿದ ಅವರು, ‘ಯೂರಿಯಾ ವಿತರಣೆಯಲ್ಲಿ ಕೊಪ್ಪಳ ಜಿಲ್ಲೆಯವರಿಗೆ ಮೊದಲ ಆದ್ಯತೆ ನೀಡಬೇಕು. ಏಕೆಂದರೆ ರಸಗೊಬ್ಬರ ಜಿಲ್ಲಾವಾರು ಹಂಚಿಕೆಯಾಗುತ್ತದೆ. ಹೀಗಾಗಿ ಅನ್ಯ ಜಿಲ್ಲೆಗಳವರು ಬಂದರೆ ಇಲ್ಲಿಯವರಿಗೆ ಅಭಾವವಾಗುತ್ತದೆ. ನಿಗದಿತ ದರದಲ್ಲಿ ಮಾರಬೇಕು, ರೈತರ ಆಧಾರ್ ಕಾರ್ಡ್‌ಗಳ ನೈಜತೆ ಖಾತರಿಪಡಿಸಿಕೊಳ್ಳಲು ತಾಕೀತು ಮಾಡಿದರು. ಅಲ್ಲದೆ ದಾಸ್ತಾನು ಇದ್ದರೂ ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಯೂರಿಯಾಕ್ಕೆ ಪರ್ಯಾಯ ಮತ್ತು ಪರಿಣಾಮಕಾರಿ ಆಗಿರುವ ನ್ಯಾನೊ ಯೂರಿಯಾ ದ್ರವ ಬಳಕೆ ಮಾಡುವುದರಿಂದ ಆಗುವ ಪ್ರಯೋಜನ ಕುರಿತು ರೈತರಿಗೆ ವಿವರಿಸಿದ ಜಿಲ್ಲಾಧಿಕಾರಿ ಈ ವಿಷಯದಲ್ಲಿ ರೈತರಿಗೆ ಮನವರಿಕೆ ಮಾಡಿಕೊಡುವಂತೆ ಕೃಷಿ ಇಲಾಖೆಗೆ ಮತ್ತು ವಿತರಕರಿಗೆ ಸೂಚಿಸಿದರು. ಯೂರಿಯಾ ವಿತರಣೆಯಲ್ಲಿನ ಸಮಸ್ಯೆಗಳನ್ನು ಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಬಸಟೆಪ್ಪ ಕುಂಬಳಾವತಿ, ವಿಠ್ಠಲ ಶೆಟ್ಟರ, ರಾಜಶೇಖರ ಅರಳೆಲೆಮಠ ಇತರರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಇತರರು ಪಾಲ್ಗೊಂಡಿದ್ದರು.
ಯೂರಿಯಾ ಗೊಬ್ಬರ ಸಮಸ್ಯೆ ಕುರಿತು ವಾಸ್ತವ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಎರಡು ದಿನಗಳವರೆಗೆ ಅಗತ್ಯ ಪ್ರಮಾಣದ ಯೂರಿಯಾ ಪೂರೈಕೆಯಾಗಲಿದೆಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.