ಕುಷ್ಟಗಿ: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಸ್ವತಃ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ ಅವರೂ ಭಾಗಿಯಾಗಿರುವ ಶಂಕೆ ಇದೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾಗೇಂದ್ರ ಕೇವಲ ಶೇ 20ರಷ್ಟು ಹಣ ನುಂಗಿರಬಹುದು. ಆದರೆ ಮುಖ್ಯಮಂತ್ರಿ ಗಮನಕ್ಕಿಲ್ಲದೆ ಇಂಥ ದೊಡ್ಡ ಹಣಕಾಸು ಹಗರಣ ನಡೆಯಲು ಸಾಧ್ಯವೇ ಇಲ್ಲ. ಹಗರಣವನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ರಾಜ್ಯ ಸರ್ಕಾರ ತನಿಖೆಯನ್ನು ಎಸ್‌ಐಟಿಗೆ ವಹಿಸಿದೆ’ ಎಂದು ಆರೋಪಿಸಿದರು.
ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವುದು ಅಚ್ಚರಿ ತಂದಿದೆ. ಕೇಂದ್ರದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿದ್ದು, ಯಾವುದೇ ಹಗರಣದ ತನಿಖೆ ನಡೆಸಲು ಅವಕಾಶವಿದೆ. ಹೀಗಿರುವಾಗ ಬಿಜೆಪಿ ಕುಮ್ಮಕ್ಕು ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಹಾಗಾದರೆ ನಿಗಮದ ಹಣವನ್ನು ಮನಬಂದಂತೆ ಲೂಟಿ ಮಾಡಲು ಬಿಜೆಪಿ ಹೇಳಿತ್ತೆ ಎಂದು ಪ್ರಶ್ನಿಸಿದರು.
ಎಸ್‌ಸಿಪಿ, ಟಿಎಸ್‌ಪಿ ಅದು ಕಾನೂನು ಹೊರತು ಯೋಜನೆ ಅಲ್ಲ. ಅದರಲ್ಲಿನ ಹಣ ಬೇರೆ ಉದ್ದೇಶಗಳಿಗೆ ಬಳಸಬೇಕೆಂದರೆ ಅದಕ್ಕೆ ವಿಧಾನಸಭೆಯಲ್ಲಿ ತಿದ್ದುಪಡಿಯಾಗಬೇಕು. ಆದರೆ ಗ್ಯಾರಂಟಿ ಯೋಜನೆಗೆ ಆ ಹಣ ಬಳಕೆ ಮಾಡಿಕೊಂಡು ವಾಲ್ಮೀಕಿ ಸಮುದಾಯಕ್ಕೂ ನ್ಯಾಯ ಒದಗಿಸಿದ್ದೇವೆ ಎಂದು ಹೇಳುವ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಿರುವುದನ್ನು ಸ್ವತಃ ಮುಖ್ಯಮಂತ್ರಿಯೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಗರಣಗಳ ಸರಮಾಲೇಯೇ ಹೊರಬರುತ್ತಿದೆ. ಅಭಿವೃದ್ಧಿ ಶೂನ್ಯವಾಗಿ ಹಣ ಕೊಳ್ಳೆ ಹೊಡೆಯುವುದರಲ್ಲಿಯೇ ಕಾಂಗ್ರೆಸ್ಸಿಗರು ನಿರತರಾಗಿದ್ದಾರೆ ದೂರಿದರು.
‘ರಾಯರಡ್ಡಿ ಅಂಥವರಿಗಷ್ಟೇ ಹಣ’
ಯಲಬುರ್ಗಾ ಕ್ಷೇತ್ರದ ಮಾದರಿಯಲ್ಲಿ ಕುಷ್ಟಗಿಯಲ್ಲಿಯೂ ಕೆರೆಗಳ ಅಭಿವೃದ್ಧಿ ಮಾಡಬಹುದಿತ್ತಿಲ್ಲವೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ‘ಅಭಿವೃದ್ಧಿಗೆ ಅನುದಾನ ನೀಡದಿರುವುದು ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗಷ್ಟೇ ಅಲ್ಲ. ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ವಿರುದ್ಧ ಗೊಣಗುತ್ತಿದ್ದಾರೆ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಂಥವರಿಗೆ ಮಾತ್ರ ನೂರಾರು ಕೋಟಿ ಅನುದಾನ ಬಿಡುಗಡೆಯಾಗುತ್ತಿದೆ’ ಎಂದು ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.