
ಕೊಪ್ಪಳ: ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಒದಗಿಸಲು ತೋಟಗಾರಿಕಾ ಇಲಾಖೆಯು ಶಿವರಾತ್ರಿ ಅಂಗವಾಗಿ ಫೆ. 12ರಿಂದ 16ರ ತನಕ ಇಲ್ಲಿನ ಇಲಾಖೆಯ ಕಚೇರಿಯ ಆವರಣದಲ್ಲಿ ತರಹೇವಾರಿ ಹಣ್ಣುಗಳ ಮೇಳ ಹಮ್ಮಿಕೊಂಡಿದೆ.
ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಜೇನು ಹಾಗೂ ಅಣಬೆ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ. ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ತಂಗಡಗಿ ಉದ್ಘಾಟಿಸವರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು.
ಕಾರ್ಯಾಗಾರ: ಮೇಳದಲ್ಲಿ ಜೇನು ಸಾಕಾಣಿಕೆ ಕುರಿತು ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿದ್ದು, ಪಾರಂಪರಿಕ ವೈದ್ಯರು ಹಾಗೂ ಜೇನು ಕೃಷಿ ತಜ್ಞರಾದ ಮಧುಕೇಶ್ವರ ಜಿ.ಹೆಗಡೆ ಕಾರ್ಯಾಗಾರ ನಡೆಸಿಕೊಡುವರು.
ಕೊಪ್ಪಳದ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ, ಕನಕಗಿರಿಯ ರೈತ ಜೀವ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ, ಕುಷ್ಟಗಿಯ ಕಪಿಲತೀರ್ಥ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ, ತಾವರಗೇರಿಯ ಅಮೃತವರ್ಷಿಣಿ ರೈತ ಉತ್ಪಾದಕರ ಸಂಸ್ಥೆ, ಬೇವೂರಿನ ಯಲಬುರ್ಗಾ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ, ಕುಕನೂರಿನ ಗಂಧ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಹೀಗೆ ಅನೇಕ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಸಿ.ಉಕ್ಕುಂದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.