
ಕೊಪ್ಪಳ: ನಾಲ್ಕು ದಶಕಗಳ ಹಿಂದೆ ಇಲ್ಲಿನ ಗವಿಮಠ ರಸ್ತೆಯಲ್ಲಿರುವ ಪಾಂಡುರಂಗ ದೇವಸ್ಥಾನದಲ್ಲಿ ಆರಂಭಿಸಲಾಗಿದ್ದ ‘ಅಖಂಡ ವೀಣಾ ಜಾಗರಣೆ ಸೇವೆ’ ಇಂದಿಗೂ ಮುಂದುವರಿದುಕೊಂಡು ಬಂದಿದೆ. 40 ವರ್ಷಗಳ ಸುದೀರ್ಘ ಅವಧಿಯಲ್ಲಿ ಸೇವಾಕರ್ತರು ಒಮ್ಮೆಯೂ ವೀಣೆಯಲ್ಲಿ ನೆಲಕ್ಕೆ ಇರಿಸಿಲ್ಲ ಎನ್ನುವುದು ವಿಶೇಷ.
ವಾಸಕರ ವಾರಕರಿ ಸಂಸ್ಥಾ ಟ್ರಸ್ಟ್ ಅಧೀನದಲ್ಲಿರುವ ಪಾಂಡುರಂಗ ದೇವಸ್ಥಾನಕ್ಕೆ ಭೇಟಿ ನೀಡಿದಾಕ್ಷಣ ಮೊದಲು ಕಾಣುವುದು ವೀಣೆಯನ್ನು ಬಾರಿಸುತ್ತ ಪಾಂಡುರಂಗನನ್ನು ಸ್ಮರಿಸುವ ವಾರಕರಿಗಳು. ಒಂದು ದಿನಕ್ಕೆ ಆರು ಜನ ಸೇವಕರ್ತರಂತೆ ಪ್ರತಿ ಸೇವಾಕರ್ತ ಹಗಲಿನಲ್ಲಿ ಎರಡು ತಾಸು ಹಾಗೂ ರಾತ್ರಿಯ ಹೊತ್ತು ಎರಡು ತಾಸು ವೀಣೆಯನ್ನು ಹೊತ್ತುಕೊಂಡು ಸೇವೆ ಸಲ್ಲಿಸುತ್ತಾರೆ. ರಾತ್ರಿ ಭಕ್ತರಿಗಾಗಿ ದೇವಸ್ಥಾನ ಮುಚ್ಚಿದರೂ ಸೇವೆ ಮಾಡುವವರು ಮಾತ್ರ ನಿರಂತರವಾಗಿ ಇರುತ್ತಾರೆ.
‘ನಮ್ಮಜ್ಜ ಕೃಷ್ಣಾಜಿರಾವ್ ಜ್ಞಾನಮೋಟೆ ಅವರು ಅಖಂಡ ವೀಣಾವಾದನವನ್ನು ಇಲ್ಲಿನ ಪಾಂಡುರಂಗ ದೇವಸ್ಥಾನದಲ್ಲಿ ಆರಂಭಿಸಿದರು. ಆಗಿನಿಂದ ಇಂದಿನ ತನಕ ನಡೆದುಕೊಂಡು ಬಂದಿದೆ’ ಎಂದು ಕೃಷ್ಣಾಜಿರಾವ್ ಅವರ ಮೊಮ್ಮಗ ತುಕಾರಂ ಜ್ಞಾನಮೋಟೆ ತಿಳಿಸಿದರು.
ವೀಣೆ ನುಡಿಸುವ ಅವಕಾಶ ಎಲ್ಲರಿಗೂ ಕೊಡುವುದಿಲ್ಲ. ವರ್ಷಕ್ಕೆ ಒಂದು ಸಲವಾದರೂ ಪಂಢರಾಪುರಕ್ಕೆ ಹೋಗಿ ಗುರುದೀಕ್ಷೆ ತೆಗೆದುಕೊಂಡು ಬರುವ ವಾರಕಾರಿಗಳಿಗೆ ಮಾತ್ರ ವೀಣೆ ಹೊತ್ತುಕೊಳ್ಳುವ ಅವಕಾಶ ಲಭಿಸುತ್ತದೆ. ಈ ಸೇವೆ ಮಾಡುವವರಿಗೆ ಉಚಿತವಾಗಿ ವಸತಿ, ಪ್ರಸಾದದ ವ್ಯವಸ್ಥೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗುತ್ತದೆ.
ಪ್ರಸ್ತುತವಿರುವ ವೀಣೆಯನ್ನು 8–10 ವರ್ಷಗಳ ಹಿಂದೆ ಬದಲಾವಣೆ ಮಾಡಲಾಗಿತ್ತು. ಸಮಸ್ಯೆಯಾದಾಗ ಮಾತ್ರ ಈ ರೀತಿಯ ಬದಲಾವಣೆ ಮಾಡಲಾಗುತ್ತದೆ. ವೀಣೆ ಬದಲಾದರೂ ನೆಲಕ್ಕೆ ಮಾತ್ರ ಇರಿಸಿಲ್ಲ. ಭಕ್ತರ ಭಕ್ತಿ, ಅವರ ಸಹಾಯ ಹಾಗೂ ಸಹಕಾರದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ವರ್ಷಕ್ಕೊಮ್ಮೆ ಬಂದು ಸೇವೆ ಮಾಡುವವರೂ ಇದ್ದಾರೆ.
ಮಾಘಯಾತ್ರಾ ಮಹೋತ್ಸವ
ಪಾಂಡುರಂಗ ದೇವಸ್ಥಾನದಲ್ಲಿ ಜ.19ರಿಂದ ಆರಂಭವಾಗಿರುವ ಮಾಘಯಾತ್ರಾ ಮಹೋತ್ಸವ ಭಾನುವಾರ ಮುಕ್ತಾಯಗೊಳ್ಳಲಿದೆ. ಮರಾಠಿಯಲ್ಲಿರುವ ಅಭಂಗಗಳನ್ನು ಅರ್ಥವಾಗುವಂತೆ ಕನ್ನಡಕ್ಕೆ ಅನುವಾದಿಸಿ ಹೇಳುವ ತಜ್ಞರು ಬಂದಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.