ADVERTISEMENT

ಅಪೂರ್ಣ ಕಾಮಗಾರಿಗಳ ಜುಂಜಲಕೊಪ್ಪ

ಕಾನೂನು ಪುಸ್ತಕದಲ್ಲೊಂದು, ವಾಸ್ತವದಲ್ಲಿ ಇನ್ನೊಂದು!

​ಪ್ರಜಾವಾಣಿ ವಾರ್ತೆ
Published 13 ಮೇ 2025, 4:08 IST
Last Updated 13 ಮೇ 2025, 4:08 IST
ಜುಂಜಲಕೊಪ್ಪ ಗ್ರಾಮದಲ್ಲಿ ಅಪೂರ್ಣವಾಗಿರುವ ರಸ್ತೆ ಕಾಮಗಾರಿ
ಜುಂಜಲಕೊಪ್ಪ ಗ್ರಾಮದಲ್ಲಿ ಅಪೂರ್ಣವಾಗಿರುವ ರಸ್ತೆ ಕಾಮಗಾರಿ   

ಹನುಮಸಾಗರ: ಗ್ರಾಮಗಳ ಅಭಿವೃದ್ಧಿಗೆ ಅನೇಕ ಯೋಜನೆಗಳು ರೂಪುಗೊಂಡಿದ್ದರೂ, ಚಳಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಜುಂಜಲಕೊಪ್ಪ ಗ್ರಾಮಸ್ಥರು ಮೂಲಸೌಲಭ್ಯಗಳಿಗಾಗಿ ಇನ್ನೂ ಕನಸನ್ನೇ ಕಾಣುತ್ತಿದ್ದಾರೆ. ಸುಮಾರು 1,000ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಈ ಗ್ರಾಮ ಸೌಕರ್ಯಗಳ ಕೊರತೆಯಿಂದ ಸಂಕಷ್ಟದಲ್ಲಿದೆ.

ಚರಂಡಿ ದರ್ಬಾರು: ಗ್ರಾಮದೊಳಗಿನ ಚರಂಡಿಗಳು ತುಂಬಿ ತುಳುಕುತ್ತಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ರಸ್ತೆಯಲ್ಲಿ ನಡೆಯಲೂ ಹೆದರುತ್ತಿದ್ದಾರೆ. ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ.

ಅಪೂರ್ಣ ಸಿಸಿ ರಸ್ತೆ: ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಆದರೆ ಅನುದಾನ ಬಿಡುಗಡೆ ಆಗಿದೆಯೆಂಬ ಸುದ್ದಿ ಇದ್ದರೂ ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ರಸ್ತೆಯಲ್ಲಿ ಜಲ್ಲಿಕಲ್ಲು ಹಾಕಿ ಬಾಕಿ ಕೆಲಸ ಮರೆತುಬಿಟ್ಟಿದ್ದಾರೆ. ಇದರ ಧೂಳಿನಿಂದ ಸ್ಥಳೀಯರ ಆರೋಗ್ಯ ಸಮಸ್ಯೆ ಎದುರಾಗಿದೆ. ರಸ್ತೆ ಬದಿಯಲ್ಲೇ ಮಲಗುವಂತಾಗಿದೆ ಎಂಬಂತಿದೆ ಪರಿಸ್ಥಿತಿ.

ADVERTISEMENT

ಗ್ರಾ.ಪಂ. ಸದಸ್ಯರ ನಿಷ್ಕ್ರಿಯತೆ: ಜುಂಜಲಕೊಪ್ಪ ಗ್ರಾಮ ಚಳಗೇರಿ ಗ್ರಾಪಂ ವ್ಯಾಪ್ತಿಗೆ ಸೇರಿದರೂ, ಇಲ್ಲಿ ಚುನಾಯಿತ ಸದಸ್ಯರು ಪಕ್ಕದ ಜೂಲಕಟ್ಟಿ ಗ್ರಾಮದವರು. ಅವರು ಜುಂಜಲಕೊಪ್ಪ ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸುವುದು ದುರ್ಲಭ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಇಲ್ಲದಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ.

ಬೆಳಕು ಇಲ್ಲದ ಬಡಾವಣೆ: ಆಂಜನೇಯ ದೇವಾಲಯ ರಸ್ತೆಯಲ್ಲಿ ವಿದ್ಯುತ್ ಕಂಬವಿಲ್ಲದ ಕಾರಣ, ರಾತ್ರಿ ವೇಳೆಗೆ ಬೆಳಕು ಇಲ್ಲದೇ ಕತ್ತಲಲ್ಲಿ ಜನರು ಹೆದರುತ್ತಿದ್ದಾರೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಸಂಚರಿಸಲು ಆತಂಕಪಡುತ್ತಿದ್ದಾರೆ. ಸ್ಥಳೀಯರು ಈ ಬಗ್ಗೆ ಹಲವಾರು ಬಾರಿ ವರದಿ ಸಲ್ಲಿಸಿದರೂ, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

‘ಇಲ್ಲಿ ಬದುಕುವುದು ನಿತ್ಯವೂ ಒಂದು ಸವಾಲಾಗಿದೆ. ನಾವು ಸರ್ಕಾರದ ಕಡೆ ನೋಡುವುದಕ್ಕಿಂತ ಬೇರೇನೂ ಮಾಡಲಾಗದು’ ಎನ್ನುತ್ತಾರೆ ಸ್ಥಳೀಯ ಹನುಮಗೌಡ ವೀರನಗೌಡ ಪೊಲೀಸ್ ಪಾಟೀಲ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡು ಗ್ರಾಮವಾಸಿಗಳಿಗೆ ಬೇಕಾದ ಸೌಲಭ್ಯ ಒದಗಿಸಬೇಕು’ ಎಂಬುದು ಎಲ್ಲರ ಮನವಿ.‌

ಎರಡೂವರೆ ತಿಂಗಳಿಂದ ಅರೆಬರೆ ರಸ್ತೆ ನಿರ್ಮಾಣ ಮಾಡಿ ಕೈಬಿಡಲಾಗಿದೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಹಣ ಪೋಲಾಗುತ್ತಿದೆ
ಹನುಮಗೌಡ ವೀರನಗೌಡ ಪೊಲೀಸ್‌ಪಾಟೀಲ ಸ್ಥಳೀಯ ನಿವಾಸಿ
ಅಪೂರ್ಣವಿರುವ ಸಿಸಿ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರನೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಕೆಲಸವನ್ನು ಪುನರಾರಂಭಿಸಿ ಪೂರ್ಣಗೊಳಿಸಲಾಗುವುದು
ಶಂಕರ ಕೋಟೆಕಲ ಪಿಡಿಒ ಚಳಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.