ADVERTISEMENT

ಕುಷ್ಟಗಿ: ಸ್ಮಶಾನಕ್ಕಾಗಿ ಗ್ರಾಮಸ್ಥರ ಪಾದಯಾತ್ರೆ

ಭೂ ಪರಿವರ್ತನೆಗೆ ತಹಶೀಲ್ದಾರ್ ಮುತುವರ್ಜಿ; ನಿಡಶೇಸಿ ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 6:24 IST
Last Updated 28 ನವೆಂಬರ್ 2021, 6:24 IST
ರುದ್ರಭೂಮಿ ಜಾಗ ಸ್ವಾಧೀನಕ್ಕೆ ಒತ್ತಾಯಿಸಿ ಕುಷ್ಟಗಿ ತಾಲ್ಲೂಕು ನಿಡಶೇಸಿ ಗ್ರಾಮಸ್ಥರು ಪಟ್ಟಣಕ್ಕೆ ಪಾದಯಾತ್ರೆ ನಡೆಸಿದರು
ರುದ್ರಭೂಮಿ ಜಾಗ ಸ್ವಾಧೀನಕ್ಕೆ ಒತ್ತಾಯಿಸಿ ಕುಷ್ಟಗಿ ತಾಲ್ಲೂಕು ನಿಡಶೇಸಿ ಗ್ರಾಮಸ್ಥರು ಪಟ್ಟಣಕ್ಕೆ ಪಾದಯಾತ್ರೆ ನಡೆಸಿದರು   

ಕುಷ್ಟಗಿ: ಖಾಸಗಿ ವ್ಯಕ್ತಿಯ ವಶದಲ್ಲಿರುವ ರುದ್ರಭೂಮಿಯನ್ನು ಸ್ವಾಧೀನಪಡಿಸಿಕೊಂಡು ಶವಸಂಸ್ಕಾರಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ನಿಡಶೇಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿವರೆಗೆ ಸಾಮೂಹಿಕ ಪಾದಯಾತ್ರೆ ಮೂಲಕ ಆಗಮಿಸಿದ ಗ್ರಾಮದ ನೂರಾರು ಜನರು ನಂತರ ಗ್ರೇಡ್‌-2 ತಹಶೀಲ್ದಾರ್ ಮುರಳೀಧರ ಮುಕ್ತೆದಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಮುಖಂಡ ಆರ್.ಕೆ.ದೇಸಾಯಿ, ಗ್ರಾಮಸ್ಥರು ಕಳೆದ ಅನೇಕ ದಶಕಗಳಿಂದಲೂ ಸ್ಮಶಾನಕ್ಕೆ ಬಳಕೆ ಮಾಡುತ್ತಿದ್ದರು. ವ್ಯಕ್ತಿಯೊಬ್ಬರು ಅದನ್ನು ಮೂಲ ಮಾಲೀಕರಿಂದ ಖರೀದಿಸಿ ನಂತರ ಕೃಷಿಯೇತರ (ಎನ್‌ಎ)ವಾಗಿ ಪರಿವರ್ತಿಸಿದ್ದಾರೆ. ಆದರೆ ಶವ ಸಂಸ್ಕಾರ ನಡೆಸಿದ ಕುರುಹುಗಳಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಅದನ್ನು ಪರಿಗಣಿಸದೆ ಭೂ ಪರಿವರ್ತನೆಗೊಳಿಸುವುದಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಊರಿಗೊಂದು ಸ್ಮಶಾನ ನೀಡಬೇಕು ಎಂಬ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದರು.

ADVERTISEMENT

ಅಷ್ಟೇ ಅಲ್ಲದೆ ಸ್ಮಶಾನದ ಜಮೀನು ಖರೀದಿಸಿದ್ದನ್ನು ಆಕ್ಷೇಪಿಸಿ ಗ್ರಾಮಸ್ಥರು ಕಳೆದ ಮೇ 5 ರಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಅದೇ ತಿಂಗಳಲ್ಲಿ ಭೂ ಪರಿವರ್ತನೆಗೊಂಡಿದೆ. ಪಹಣಿ ಪತ್ರಿಕೆಯಲ್ಲಿಯೂ ‘ನಿವೇಶನಕ್ಕಾಗಿ ಭೂಮಿ ಪರಿವರ್ತನೆ’ ಎಂದು ದಾಖಲಾಗುವಂತೆ ಮಾಡುವಲ್ಲಿ ಇಲ್ಲಿಯ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿರುವುದು ಅಚ್ಚರಿ ಮೂಡಿಸಿದೆ ಎಂದು ದೂರಿದರು.

ಸ್ಮಶಾನ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಗ್ರಾಮಸ್ಥರು ಅನೇಕ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ, ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ತಹಶೀಲ್ದಾರ್ ಮತ್ತು ಜಿಲ್ಲಾಡಳಿತ ಸ್ಪಂದಿಸಿಲ್ಲ. ಭೂ ಪರಿವರ್ತನೆಯನ್ನು ತಕ್ಷಣ ರದ್ದುಪಡಿಸಿ ಸ್ಮಶಾನಕ್ಕೆ ದೊರಕಿಸಿಕೊಡಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಗ್ರಾಮಸ್ಥರಾದ ವಿಠ್ಠಲ ಚಳಗೇರಿ, ಮಂಜುನಾಥ ಕರಿಭೀಮಪ್ಪನವರ, ರಾಮಣ್ಣ ಬಂಡಿಹಾಳ ಮಾತನಾಡಿದರು. ಅಣಕು ಶವ ಪ್ರದರ್ಶನ, ಬಾಯಿಬಡಿದುಕೊಂಡು ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು.

ಗ್ರಾಮಸ್ಥರ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ತಿಳಿಸಿದರು.

ಪ್ರಮುಖರಾದ ಬಂಗಾರೆಪ್ಪ ಅಗಸಿಮುಂದಿನ, ಬಸವರಾಜ ದಳಪತಿ, ಪರಸಪ್ಪ ಗಾದಾರಿ, ಮಹಾಂತಪ್ಪ ಹುಣಿಸ್ಯಾಳ, ಬಸವಂತಸಿಂಗ್ ರಜಪೂತ, ಶರಣಪ್ಪ ಹಾದಿಮನಿ, ಲಕ್ಷ್ಮಣ ಚಳಗೇರಿ, ಧೀರೇಂದ್ರರಾವ ಮುಜಮದಾರ, ಭರಮಪ್ಪ ಭಜಂತ್ರಿ, ಶಿವಪ್ಪ ಭಜಂತ್ರಿ, ಗುಡಿಯಪ್ಪ ಅಗಸಿಮುಂದಿನ, ಮಂಜುನಾಥ ಗುಳಗುಳಿ, ಈರಪ್ಪ ಮೊಕಾಸಿ, ಕನಕಪ್ಪ ಅಗಸಿಮುಂದಿನ, ಶಿವಪ್ಪ ಗಾದಾರಿ, ಗೋವಿಂದಪ್ಪ ಹಾವರಗಿ, ಹನಮಪ್ಪ ಬಂಡಿಹಾಳ, ಶುಕಮುನಿ ಹಾದಿಮನಿ, ಚನ್ನಪ್ಪ ಅಂಗಡಿ, ವೀರೇಶ ಲೆಕ್ಕಿಹಾಳಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.