
ಕೊಪ್ಪಳ: ‘ನಾಗಮೂರ್ತೇಂದ್ರ ಸ್ವಾಮೀಜಿಯ ಕಾರ್ಯ ಶ್ಲಾಘನೀಯವಾಗಿದ್ದು, ಮಠದ ಮೂಲ ಪವಾಡ ಪುರುಷ ಲಕ್ಷ್ಮೇಂದ್ರ ಸ್ವಾಮೀಜಿಯ ಮಠಕ್ಕೆ ಬಂದರೆ ಭಕ್ತರು ಅಂದುಕೊಂಡಿದ್ದು ಈಡೇರುತ್ತದೆ’ ಎಂದು ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ಇತ್ತೀಚೆಗೆ ಲಕ್ಷ್ಮೇಂದ್ರ ಸ್ವಾಮೀಜಿ ಮಠದ ಶತಮಾನೋತ್ಸವ ಅಂಗವಾಗಿ ವಿಶ್ವಕರ್ಮ ಸಮಾಜದವರಿಗೆ ನಡೆದ ಉಚಿತ ಸಾಮೂಹಿಕ ಉಪನಯನ ಹಾಗೂ ವಿವಾಹ ಕಾರ್ಯಕ್ರಮದಲ್ಲಿ 6 ಜೋಡಿಗೆ ಕಂಕಣ ಭಾಗ್ಯ ನೆರವೇರಿಸಿದ ಅವರು ಮಾತನಾಡಿದರು.
‘ರಾಜ್ಯದಲ್ಲಿರುವ ವಿಶ್ವಕರ್ಮ ಸಮಾಜದ ಮಠಗಳು ಪ್ರವಚನ, ಸಾಂಸ್ಕೃತಿಕತೆಗೆ ಹೆಸರು ಮಾಡಿವೆ.ಲೇಬಗಿರಿ ಗ್ರಾಮದ ಶ್ರೀಮಠ ವಿಶೇಷ ಆದ್ಯತೆ ಪಡೆದಿದೆ. ಎಲ್ಲರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಇಲ್ಲಿನ ಮಠದ ಹೊಂದಿದೆ. ಮಠದ ಬೆಳವಣಿಗೆಯಲ್ಲಿ ಭಕ್ತರ ಕೊಡುಗೆಯೂ ಅಪಾರವಾಗಿದೆ’ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ’ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಶ್ರೀಮಠದ ಭಕ್ತನಾಗಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಆಡಂಬರದ ಜೀವನ ಹಾಗೂ ದುಂದುವೆಚ್ಚದಿಂದ ಸಾಮಾನ್ಯ ಜನತೆಯ ಮದುವೆಯ ಸಾಲದ ಸುಳಿಯಲ್ಲಿ ಸಿಕ್ಕು ನಲುಗುತ್ತಾರೆ. ನಾಗಮೂರ್ತೇಂದ್ರ ಸ್ವಾಮೀಜಿ ಮುಂದೆ ಬಂದು ಉಚಿತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಮಾದರಿಯಾಗಿದೆ’ ಎಂದರು.
ವಿಶ್ವಕರ್ಮ ಸಮಾಜದ ರಾಜ್ಯ ಮುಖಂಡ ಕೆ.ಪಿ ನಂಜುಂಡಿ ಮಾತನಾಡಿ ‘ರಾಜ್ಯ ಸರ್ಕಾರ ಹಾಗೂ ನಮ್ಮನ್ನು ಆಳುವ ಜನಪ್ರತಿನಿಧಿಗಳು ಸಮಾಜಕ್ಕೆ ವಂಚನೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆಯಿದೆ. ಆದರೆ ದೇವಸ್ಥಾನಗಳಲ್ಲಿ ವಿಶ್ವಕರ್ಮ ಸಮಾಜದ ಯಾರ ಹೆಸರು ಇಲ್ಲದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಧ ಜಿಲ್ಲೆಗಳ ವಿಶ್ವಕರ್ಮ ಸಮಾಜದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ನಮಗೆ ನ್ಯಾಯ ಸಿಗುತ್ತದೆ. ಶ್ರೀಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆದ ಎಲ್ಲಾ ಭಕ್ತರಿಗೂ ಆರೋಗ್ಯ ಸಿರಿ ಸಂಪತ್ತು ಲಭಿಸಲಿ ಎಂದು ಪ್ರಾರ್ಥಿಸುವೆ.ನಾಗಮೂರ್ತೇಂದ್ರ ಸ್ವಾಮೀಜಿ ಲೇಬಗೇರಿ ಮಠದ ಪೂಜ್ಯರು