ADVERTISEMENT

ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು

ಕನಕಗಿರಿ ಪ.ಪಂ: 17 ಸ್ಥಾನಗಳಿಗೆ 27ರಂದು ಮತದಾನ

ಮೆಹಬೂಬ ಹುಸೇನ
Published 21 ಡಿಸೆಂಬರ್ 2021, 5:17 IST
Last Updated 21 ಡಿಸೆಂಬರ್ 2021, 5:17 IST

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಯ 17 ಸ್ಥಾನಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು 46 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈ ಕೊರೆಯುವ ಚಳಿಯಲ್ಲಿಯೂ ಬೆವರುತ್ತಿದ್ದಾರೆ.

ನಾಮಪತ್ರ ನೀಡುವ ಕೊನೆಯ ದಿನದಿಂದಲೂ ಆರಂಭವಾಗಿರುವ ರಾಜಕೀಯ ಚಟುವಟಿಕೆಗಳು ತೀವ್ರ ಬಿರುಸುಗೊಂಡಿವೆ.

ADVERTISEMENT

ಕಾರ್ಯಕರ್ತರು, ಮತದಾರರಿಗಾಗಿ ಹೊಲ, ತೋಟದಲ್ಲಿ ಬಾಡೂಟದ ಕೂಟಗಳನ್ನು ಆಯೋಜಿಸಿರುವ ಅಭ್ಯರ್ಥಿಗಳು ಕಾರ್ಯಕರ್ತರಿಗೆ ಬೇಕಾದ ತುಟ್ಟಿ ಬೆಲೆಯ ಮದ್ಯದ ಬಾಟಲಿಗಳನ್ನು ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಬಯಸಿದ್ದ ಕೆಲ ಆಕಾಂಕ್ಷಿಗಳು ಕಳೆದ ಎರಡು ವರ್ಷ ಘೋಷಿಸಿದ ಲಾಕ್‌ಡೌನ್‌ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆ ಬಾಗಿಲಿಗೆ ಆಹಾರದ ಕಿಟ್ ಹಾಗೂ ತರಕಾರಿ ನೀಡಿ ಗಮನ ಸೆಳೆದಿದ್ದರು.

ಈಗ ಮುಂದುವರಿದ ಭಾಗ ಎನ್ನುವಂತೆ ಕೆಲ ವಾರ್ಡ್‌ಗಳ ಮನೆ ಮನೆಗೆ ಅಕ್ಕಿ ಚೀಲ (25 ಕೆಜಿ) ನೀಡಿದ್ದಲ್ಲದೆ ಕುಟುಂಬ ಸದಸ್ಯರ ಸಂಖ್ಯೆಗನುಣವಾಗಿ ಮನೆಗೆ ಕೆಜಿಗಟ್ಟಲೆ ಕೋಳಿ ಮಾಂಸ ನೀಡಿದ್ದಾರೆ.

ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಸಾವಜಿ ಖಾನಾವಳಿಗಳು ಜನದಟ್ಟಣೆಯಿಂದ ಕೂಡಿದ್ದು ಕಂಡುಬರುತ್ತಿದೆ. ಪ್ರಚಾರ ನಡೆಸಿ ನೇರವಾಗಿ ಖಾನಾವಳಿ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಖಾನಾವಳಿಗೆ ಬಾರದ ಹಿರಿಯರಿಗೆ ನೇರವಾಗಿ ಮನೆ ಬಾಗಿಲಿಗೆ ಮದ್ಯದ ಬಾಟಲಿ ತಲುಪಿಸುವ ಕೆಲಸ ಜೋರಾಗಿ ನಡೆದಿದೆ. ಸಂಜೆ ಆಗುತ್ತಲೇ ಈ ಚಟುವಟಿಕೆ ವೇಗ ಪಡೆಯುತ್ತದೆ.

ಮದ್ಯ ಹಾಗೂ ಹಣ ನೀಡದಿದ್ದರೆ ಕಾರ್ಯಕರ್ತರು ಪ್ರಚಾರದಿಂದ ದೂರ ಉಳಿದು ಅಭ್ಯರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ನಡೆದಿವೆ.

ಶಾಸಕ ಬಸವರಾಜ ದಢೇಸೂಗೂರು ಹಾಗೂ ಡಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಪಟ್ಟಣ ಪಂಚಾಯಿತಿ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಅಳೆದು, ತೂಗಿ ಟಿಕೆಟ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.