ADVERTISEMENT

13ರಿಂದ ಕಾಮಗಾರಿ ಸ್ಥಗಿತದ ಎಚ್ಚರಿಕೆ

ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಜಿಲ್ಲಾ ಗುತ್ತಿಗೆದಾರರ ಸಂಘ ಗರಂ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 4:22 IST
Last Updated 4 ಅಕ್ಟೋಬರ್ 2025, 4:22 IST
ಸುರೇಶ ಭೂಮರಡ್ಡಿ
ಸುರೇಶ ಭೂಮರಡ್ಡಿ   

ಕೊಪ್ಪಳ: ’ಸಂಸದ ರಾಜಶೇಖರ ಹಿಟ್ನಾಳ ಪ್ರೇರಣಾ ಎನ್ನುವ ಎಜೆನ್ಸಿ ಆರಂಭಿಸಿದ್ದು, ಜಿಲ್ಲೆಯ ಎಲ್ಲ ಕ್ರಷರ್‌ಗಳ ಮಾಲೀಕರನ್ನು ತಮ್ಮ ಎಜೆನ್ಸಿಯ ಅಧೀನಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಂದೆ ಯಾರೇ ಕ್ರಷರ್‌ ಸಂಬಂಧಿತ ಸಾಮಗ್ರಿ ಪಡೆಯಲು ಅದು ಅವರ ಎಜೆನ್ಸಿ ಮೂಲಕವೇ ಖರೀದಿ ಮಾಡಬೇಕು ಎನ್ನುವ ಸ್ಥಿತಿ ಸೃಷ್ಟಿಮಾಡಿದ್ದು ಸರಿಯಲ್ಲ’ ಎಂದು ಜಿಲ್ಲಾ ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಅರಕೇರಿ, ಯಲಬುರ್ಗಾ ತಾಲ್ಲೂಕು ಅಧ್ಯಕ್ಷ ಯಮನೂರಪ್ಪ ನಡವಲಮನಿ, ಕುಕನೂರು ತಾಲ್ಲೂಕು ಅಧ್ಯಕ್ಷ ಟಿ. ರತ್ನಾಕರ ಹಾಗೂ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹನುಮೇಶ ಕಡೇಮನಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ’ನಮ್ಮ ಅಸಮಾಧಾನವನ್ನು ಸಂಸದರ ಮುಂದೆಯೂ ಹೇಳಿದರೂ ಪ್ರಯೋಜನವಾಗಿಲ್ಲ. ಇದು ಇದೇ ರೀತಿ ಮುಂದುವರಿದರೆ ಅ. 13ರಿಂದ ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಕಾಮಗಾರಿಗಳನ್ನು ಸ್ಥಗಿತ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆಯಲ್ಲಿ ಇದುವರಗೆ ಎಲ್ಲಾ ಕ್ರಷರ್‌ಗಳ ಮಾಲೀಕರು ಹಾಗೂ ಗುತ್ತಿಗೆದಾರರ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಸಂಸದರ ನಡೆಯಿಂದ ಕ್ರಷರ್‌ಗೆ ಸಂಬಂಧಿಸಿದ ಸಾಮಗ್ರಿಗಳನ್ನು ನೇರವಾಗಿ ಮಾಲೀಕರಿಂದ ಪಡೆದುಕೊಳ್ಳಲು ಅವಕಾಶವಿಲ್ಲ. ಸಾರ್ವಜನಿಕರ ಮೇಲೂ ಇದರ ಪರಿಣಾಮ ಬೀರಲಿದೆ. ಈ ವ್ಯವಸ್ಥೆಯನ್ನು ರಾಜಶೇಖರ ಹಿಟ್ನಾಳ ಏಕಗವಾಕ್ಷಿ ಪದ್ಧತಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಗದು ನೀಡಿಯೇ ಸಾಮಗ್ರಿ ಖರೀದಿ ಮಾಡುವುದರಿಂದ ಯಾವುದೇ ಬಾಕಿ ಉಳಿಯುವುದಿಲ್ಲ ಎಂದು ಆಮಿಷವೊಡ್ಡಿ ಕ್ರಷರ್‌ಗಳ ಮಾಲೀಕರನ್ನು ಎಜೆನ್ಸಿಯೊಳಗೆ ಸೇರಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಕ್ರಷರ್‌ ಉದ್ಯಮವನ್ನು ಏಕಸ್ವಾಮ್ಯ ಮಾಡಿಕೊಂಡು ತಾವು ವಿಧಿಸುವ ದರದಲ್ಲಿಯೇ ಖರೀದಿಸುವುದನ್ನು ಕಡ್ಡಾಯವಾಗಿಸುವ ಹುನ್ನಾರ ನಡೆಯುತ್ತಿದೆ. ಇಂಥ ಎಜೆನ್ಸಿ ಪದ್ಧತಿ ಗುತ್ತಿಗೆದಾರರಿಗೆ ಮರಣಶಾಸನವಾಗಲಿದೆ. ಈಗಾಗಲೇ ಪ್ಯಾಕೇಜ್‌ ಟೆಂಡರ್ ಪದ್ಧತಿ ಜಾರಿ ಮಾಡಿ ಸಣ್ಣ ಗುತ್ತಿಗೆದಾರರನ್ನು  ಸರ್ಕಾರ ನಿರ್ಮೂಲನೆ ಮಾಡಿದ್ದು, ಈಗ ಸಂಸದರ ನಡೆಯಿಂದ ಗಾಯದ ಮೇಲೆ ಬರೆ  ಎಳೆದಂತೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನು ಆದಷ್ಟು ಬೇಗನೆ ಸರಿಪಡಿಸಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.