ADVERTISEMENT

ಕುಷ್ಟಗಿ | ಹಳ್ಳದಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮ: ಪಂಪಾಪತಿ ಹಿರೇಮಠ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:05 IST
Last Updated 20 ಅಕ್ಟೋಬರ್ 2025, 5:05 IST
<div class="paragraphs"><p>ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರ ಬಳಿ ಅಡ್ಯಾಳ ಹಳ್ಳ ಸ್ವಚ್ಛಗೊಳಿಸಿದ ಗ್ರಾ.ಪಂ ಸಿಬ್ಬಂದಿ</p></div>

ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರ ಬಳಿ ಅಡ್ಯಾಳ ಹಳ್ಳ ಸ್ವಚ್ಛಗೊಳಿಸಿದ ಗ್ರಾ.ಪಂ ಸಿಬ್ಬಂದಿ

   

ಕುಷ್ಟಗಿ: ತಾಲ್ಲೂಕಿನ ಹಿರೇಮನ್ನಾಪುರ-ಹುಲಿಯಾಪುರ ರಸ್ತೆ ಮಧ್ಯದ ಅಡ್ಯಾಳ ಹಳ್ಳ ಕೊಳದಲ್ಲಿನ ಕೊಳಚೆ, ತ್ಯಾಜ್ಯ ತೆರವುಗೊಳಿಸುವ ನಿಟ್ಟಿನಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಳ್ಳಕ್ಕಿಳಿದಿದ್ದು ಕಂಡುಬಂದಿತು.

ಈ ವರ್ಷದ ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದ ಅಡ್ಯಾಳ ಹಳ್ಳ ಕೊಳಕ್ಕೆ ಜೀವಕಳೆ ಬಂದಿತ್ತಾದರೂ ಕಳೆದ ಒಂದು ವರ್ಷದಿಂದಲೂ ಗ್ರಾಮದಲ್ಲಿನ ಅಪಾಯಕಾರಿ ಘನತ್ಯಾಜ್ಯವನ್ನೆಲ್ಲ ಹಳ್ಳದಲ್ಲಿ ವಿಲೇವಾರಿ ಮಾಡಿದ್ದ ಪಂಚಾಯಿತಿ ಸಿಬ್ಬಂದಿ ನೈಸರ್ಗಿಕ ಜಲಮೂಲವನ್ನು ಕೊಚ್ಚೆಯಾಗಿಸಿ ಕೈತೊಳೆದುಕೊಂಡಿದ್ದರು. ಘನತ್ಯಾಜ್ಯ, ರಾಶಿಗಟ್ಟಲೇ ಪ್ಲಾಸ್ಟಿಕ್‌ ಇತರೆ ಅಪಾಯಕಾರಿ ವಸ್ತುಗಳನ್ನು ಎಸೆದು ಜಲಮೂಲವನ್ನು ಅಶುದ್ಧಗೊಳಿಸಿದ ಕುರಿತು ಅ.19ರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಅಧಿಕಾರಿಗಳ ಗಮನಸೆಳೆದಿತ್ತು.

ADVERTISEMENT

ಈ ಕುರಿತು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಗೆ ತಾಕೀತು ಮಾಡಿ ಹಳ್ಳದಲ್ಲಿನ ತ್ಯಾಜ್ಯ ಹೊರಹಾಕಿ ಕೊಳವನ್ನು ಸ್ವಚ್ಛಗೊಳಿಸಲು ಎಚ್ಚರಿಕೆ ನೀಡಿದ್ದರು. ಸೂರ್ಯೋದಯಕ್ಕೆ ಮೊದಲೇ ಹಳ್ಳಕ್ಕೆ ಹಾಜರಾದ ಸಿಬ್ಬಂದಿ, ಸ್ವಚ್ಛತೆ ಕೆಲಸಗಾರರು ತ್ಯಾಜ್ಯವನ್ನು ತೆರವುಗೊಳಿಸಲು ಮುಂದಾಗಿದ್ದರು. ಅಲ್ಲದೆ ಮುಳ್ಳುಕಂಟಿ, ತಗ್ಗು ಗುಂಡಿಗಳನ್ನೆಲ್ಲ ಸಮತಟ್ಟು ಮಾಡಲು ಜೆಸಿಬಿ ಯಂತ್ರಗಳು, ಟ್ರ್ಯಾಕ್ಟರ್‌ಗಳೂ ಹಳ್ಳಕ್ಕೆ ಇಳಿದಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ಹಿರೇಮನ್ನಾಪುರ ಗ್ರಾಮಸ್ಥರು, ‘ತ್ಯಾಜ್ಯವನ್ನು ಹಳ್ಳದಲ್ಲಿ ಬಿಸಾಡುವುದಕ್ಕೆ ಈ ಹಿಂದೆ ಅನೇಕ ಬಾರಿ ಆಕ್ಷೇಪಿಸಲಾಗಿತ್ತು. ತೆರವುಗೊಳಿಸುವಂತೆಯೂ ಮನವಿ ಮಾಡಿದ್ದೆವು. ಆದರೆ ಗ್ರಾಪಂ ಅಧಿಕಾರಿಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರವಷ್ಟೇ ಸ್ವಚ್ಛತೆಗೆ ಮುಂದಾಗಿದ್ದು ತಾವು ಮಾಡಿದ ತಪ್ಪನ್ನು ತಾವೇ ಸರಿಪಡಿಸುವ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಕೊಳದಲ್ಲಿನ ಕೊಳಚೆ ಮುಳ್ಳು ಕಂಟಿ ತೆರವುಗೊಳಿಸುತ್ತಿರುವ ಜೆಸಿಬಿ ಯಂತ್ರ
ಅಡ್ಯಾಳ ಹಳ್ಳದ ಜಲಮೂಲವನ್ನು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದ್ದು ಮುಂದೆ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸುಂದರ ಕೊಳವನ್ನಾಗಿಸಲು ಪ್ರಯತ್ನಿಸಲಾಗುತ್ತದೆ
ಪಂಪಾಪತಿ ಹಿರೇಮಠ ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.