
ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದ ಪಾದಗಟ್ಟೆ ಬಳಿಯ ಆವರಣದಲ್ಲಿ ಬುಧವಾರ ನಿರ್ಮಲ ತುಂಗಭದ್ರಾ ಅಭಿಯಾನ ಜಲ ಮತ್ತು ಜನಜಾಗೃತಿ ಪಾದಯಾತ್ರೆಯ ರಥಯಾತ್ರೆಗೆ ದುರ್ಗಾದೇವಿ ದೇವಸ್ಥಾನದ ಅರ್ಚಕ ಬ್ರಹ್ಮಾನಂದ ಸ್ವಾಮಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತು ನದಿ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿರ್ಮಲ ತುಂಗಭದ್ರಾ ಅಭಿಯಾನದಡಿ ನದಿ ರಕ್ಷಣೆ ಬಗ್ಗೆ ರಾಜ್ಯದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಜಾಗೃತಿ ಅಭಿಯಾನ ನಡೆಸಿದ್ದು ಈಗ ಮೂರನೇ ಹಂತದ ಜಲ ಜಾಗೃತಿ ಕಾರ್ಯಕ್ರಮವನ್ನು ಕಿಷ್ಕಿಂಧಾ (ಗಂಗಾವತಿ)-ರಾಯಚೂರು ಮಂತ್ರಾಲಯದವರೆಗೆ ನಡೆಸಲಾಗುತ್ತಿದೆ. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದರು.
ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು ಮಾತನಾಡಿ, ‘ತುಂಗಭದ್ರಾ ನದಿಗೆ ತ್ಯಾಜ್ಯ ಎಸೆಯುವುದರಿಂದ, ಚರಂಡಿ ನೀರು ಬಿಡುವುದರಿಂದ ನೀರು ಮಲೀನವಾಗಿ ಕುಡಿಯಲು ಯೋಗ್ಯವಿಲ್ಲದಂತಾಗುತ್ತಿದೆ. ಹೀಗೆ ಮುಂದುವರಿದರೇ ಮುಂದಿನ ಪೀಳಿಗೆಯ ಬದುಕು ತುಂಬ ಕಷ್ಟಕರವಾಗಿರಲಿದೆ. ಹಾಗಾಗಿ ತುಂಗಭದ್ರಾ ನದಿ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಸಲಹೆ ನೀಡಿದರು.
ಹಾಸ್ಯ ಕಲಾವಿದ ಪ್ರಾಣೇಶ, ಶಿವಕುಮಾರ ಮಾಲಿ ಪಾಟೀಲ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ವಿಷ್ಣುತೀರ್ಥ ಜೋಶಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.