ADVERTISEMENT

ಹನುಮಸಾಗರ: ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:47 IST
Last Updated 24 ನವೆಂಬರ್ 2020, 16:47 IST
ಹನುಮಸಾಗರದ ದುರಗಮ್ಮನ ಗುಡಿ ಪ್ರದೇಶದಲ್ಲಿ ಕಸದಲ್ಲಿಯೇ ನಿಂತು ಕೊಳವೆಬಾವಿ ನೀರು ತುಂಬುತ್ತಿರುವುದು ಮಂಗಳವಾರ ಕಂಡುಬಂತು
ಹನುಮಸಾಗರದ ದುರಗಮ್ಮನ ಗುಡಿ ಪ್ರದೇಶದಲ್ಲಿ ಕಸದಲ್ಲಿಯೇ ನಿಂತು ಕೊಳವೆಬಾವಿ ನೀರು ತುಂಬುತ್ತಿರುವುದು ಮಂಗಳವಾರ ಕಂಡುಬಂತು   

ಹನುಮಸಾಗರ: ಇಲ್ಲಿನ 6ನೇ ವಾರ್ಡ್‌ನ ದುರಗಮ್ಮ ದೇವಸ್ಥಾನ ಪ್ರದೇಶದಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗಿದೆ. ಹೊರವಲಯದಲ್ಲಿನ ಕಸದಲ್ಲಿಯೇ ನಿಂತು ಕೊಳವೆಬಾವಿಯ ಉಪ್ಪು ನೀರು ತುಂಬುತ್ತಿರುವುದು ಮಂಗಳವಾರ ಕಂಡುಬಂತು.

ಹಲವಾರು ತಿಂಗಳುಗಳಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಆ ಭಾಗದ ಜನರು ದೂರುತ್ತಾರೆ.

ದೀಪಾವಳಿ ಹಬ್ಬದ ಹಿಂದಿನ ದಿನಗಳಲ್ಲಿ ಒಂದು ಗಂಟೆ ನೀರು ಬಿಟ್ಟಿದ್ದನ್ನು ಹೊರತುಪಡಿಸಿದರೆ ಇದುವರೆಗೂ ನೀರು ಬಿಟ್ಟಿಲ್ಲ. ಕೇಳಿದರೆ ಕೊಳವೆಬಾವಿಯಲ್ಲಿ ನೀರಿಲ್ಲ ಎಂದು ಉತ್ತರಿಸುತ್ತಾರೆ. ಕನಿಷ್ಠ ಪಕ್ಷ ಟ್ಯಾಂಕರ್ ನೀರಾದರೂ ಪೂರೈಕೆ ಮಾಡಿ ಎಂದು ಒತ್ತಾಯಿಸಿದರೂ ಪ್ರಯೋಜನವಾಗದಂತಾಗಿದೆ ಎಂದು ಪರಸಪ್ಪ ಕುಂಬಳಾವತಿ, ಅಂಬಾಸಾ ರಾಯಬಾಗಿ, ಈಶಪ್ಪ ಕಮ್ಮಾರ, ಮಲ್ಲೇಶ ಪೂಜಾರಿ ನೋವಿನಿಂದ ಹೇಳಿದರು.

ADVERTISEMENT

ದುರಗಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಾಲ್ಕು ತಿಂಗಳ ಹಿಂದೆ ಕೊಳವೆಬಾವಿ ಕೊರೆಸಲಾಗಿದೆ. ಆದರೆ ಈವರೆಗೆ ಅದಕ್ಕೆ ಪೈಪ್‍ಲೈನ್ ಜೋಡಣೆ ಮಾಡಿಲ್ಲ. ಕನಿಷ್ಠ ಪಕ್ಷ ಈ ಕೊಳವೆಬಾವಿಗೆ ವ್ಯವಸ್ಥಿತಿವಾಗಿ ಪೈಪ್‍ಲೈನ್ ಮಾಡಿದರೆ ಉಪ್ಪು ನೀರಾದರೂ ನಮಗೆ ಸರಿಯಾಗಿ ದಕ್ಕುತ್ತದೆ. ಆ ಕೆಲಸವನ್ನೂ ಮಾಡುತ್ತಿಲ್ಲ. ಈ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳೆಲ್ಲ ತುಂಬಿದ್ದರೂ ನಮ್ಮ ಭಾಗಕ್ಕೆ ಹದಿನೈದು ದಿನಕ್ಕೆ ಒಂದು ಬಾರಿ ಮಾತ್ರ ನೀರು ಬರುತ್ತಿರುವುದು ಮಾತ್ರ ತಪ್ಪುತ್ತಿಲ್ಲ ಎಂದು ದ್ಯಾಮಣ್ಣ ಬಿಂಗಿ, ಕರಗಪ್ಪ ಗಡೆಕಾರ, ಹುಲಿಗೆವ್ವ ತೊಂಡಿಹಾಳ, ಕಾಳಮ್ಮ ಕಂಬಾರ, ರಮೇಶ ಪಾಟೀಲ, ಹನುಮಂತ ಕುಷ್ಟಗಿ, ನಾಗುಸಾ ರಂಗ್ರೇಜ್ ದೂರಿದರು.

ಇದಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಪ್ರತಿಕ್ರಿಯೆ ನೀಡಿ,‘ಸದ್ಯ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ಅಲ್ಲದೆ, ಉಳಿದೆಲ್ಲೆಡೆ ಪೂರೈಕೆ ಮಾಡುವ ರೀತಿಯಲ್ಲಿಯೇ ನೀರು ಪೂರೈಸಲಾಗುತ್ತದೆ. ಆದರೆ ಆ ಭಾಗದಲ್ಲಿ ಬಹುತೇಕರು ನಲ್ಲಿಗೆ ಮೋಟರ್ ಬಳಸಿ ನೀರು ತುಂಬುತ್ತಿರುವ ಕಾರಣ ನೀರಿನ ಒತ್ತಡ ಕಡಿಮೆಯಗಲು ಕಾರಣವಾಗಿದೆ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.