ADVERTISEMENT

ಕುಡಿಯುವ ನೀರಿಗೆ ನಿಲ್ಲದ ಹಾಹಾಕಾರ

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ: ಗಲೀಜು ನೀರೇ ಗತಿ

ಸಿದ್ದನಗೌಡ ಪಾಟೀಲ
Published 13 ಮಾರ್ಚ್ 2019, 15:36 IST
Last Updated 13 ಮಾರ್ಚ್ 2019, 15:36 IST
ಕೊಪ್ಪಳ ತಾಲ್ಲೂಕಿನ ಅಳವಂಡಿ ರಸ್ತೆಯಲ್ಲಿ ನಿರ್ಮಿಸಿರುವ ಸಿಹಿ ನೀರಿನ ಕೆರೆಯಲ್ಲಿ ನೀರು ತುಂಬುತ್ತಿರುವ ಗ್ರಾಮಸ್ಥ
ಕೊಪ್ಪಳ ತಾಲ್ಲೂಕಿನ ಅಳವಂಡಿ ರಸ್ತೆಯಲ್ಲಿ ನಿರ್ಮಿಸಿರುವ ಸಿಹಿ ನೀರಿನ ಕೆರೆಯಲ್ಲಿ ನೀರು ತುಂಬುತ್ತಿರುವ ಗ್ರಾಮಸ್ಥ   

ಕೊಪ್ಪಳ: ಏರುತ್ತಿರುವ ಬಿಸಿಲಿನಿಂದ ಕಾಯ್ದು ಕೆಂಪಾದ ಭೂಮಿ, ಹನಿ ನೀರಿಗೂ ತತ್ವಾರ, ಬತ್ತಿದ ಕೆರೆ, ಬಾವಿ, ಹಳ್ಳ. ಅಂತರ್ಜಲ ಕುಸಿತದಿಂದ ತಳ ಕಂಡ ಕೊಳವೆಬಾವಿ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ನಿತ್ಯ ಹೋರಾಟ ಮಾಡಬೇಕಾದ ದೃಶ್ಯ ಪ್ರತಿ ಬೇಸಿಗೆಯಲ್ಲಿ ಉಲ್ಭಣವಾಗುತ್ತಿರುವುದು ಗ್ರಾಮಸ್ಥರನ್ನು ಕಂಗೆಡಿಸಿದೆ.

ನಗರ ಪ್ರದೇಶಗಳಿಗೆ ತುಂಗಭದ್ರಾ ಜಲಾಶಯದಿಂದ ವಾರಕ್ಕೆರಡು ಬಾರಿ ಪೂರೈಕೆಯಾಗುವ ನೀರು ಬಿಟ್ಟರೆ ಗ್ರಾಮೀಣ ಭಾಗದಲ್ಲಿ ನೀರಿಗೆ ಹಾಹಾಕಾರ ಮುಂದುವರೆದಿದೆ. ಗಂಗಾವತಿ, ಕಾರಟಗಿ, ಕನಕಗಿರಿ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ, ಕುಡಿಯಲು ಅಯೋಗ್ಯವಾದ ನೀರೆ ಹೆಚ್ಚು. ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿದ್ದು, ಅಶುದ್ಧ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿ ಭಾಗದಲ್ಲಂತೂ ಕುಡಿಯುವ ನೀರಿಗೆ ಹಾಹಾಕಾರವೇ ಇದೆ. ಸುತ್ತಲಿನ 20 ಹಳ್ಳಿಗಳಿಗೆ ಕೆರೆಯಲ್ಲಿ ನಿಂತ ನೀರೇ ಆಧಾರ. ತುಂಗಭದ್ರಾ ನದಿಯಿಂದ ನೀರು ಪೂರೈಕೆ ವ್ಯವಸ್ಥೆ ಇದ್ದರೂ ಶುದ್ಧೀಕರಿಸಿದೇ ಪೂರೈಕೆ ಮಾಡುವುದರಿಂದ ಕೆಂಪು ಮಿಶ್ರಿತ ಬಣ್ಣದಿಂದ ಕೂಡಿದ ನೀರು ಬರುತ್ತಿದೆ. ಇಂತಹ ನೀರನ್ನು ಕುಡಿಯಲು ಜನರು ಹಿಂದೆ, ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಅನಿವಾರ್ಯವಾಗಿ ದೂರದಲ್ಲಿ ಇರುವ ಕೆರೆಯ ನೀರು ತಂದು ಸೇವಿಸಬೇಕಾಗಿದೆ.

ADVERTISEMENT

ಕೆಲವು ಕೆರೆಗಳ ನೀರನ್ನು ಜನ, ಜಾನುವಾರು ಕೂಡಾ ಸೇವಿಸುತ್ತಿರುವುದು ಕುಡಿಯುವ ನೀರಿನ ಬವಣೆಯನ್ನು ಎತ್ತಿ ತೋರಿಸುತ್ತದೆ. ಅಳವಂಡಿ, ಬೆಟಗೇರಿ, ಕವಲೂರ, ಕಾಟ್ರಳ್ಳಿ, ಬನ್ನಿಕೊಪ್ಪದಲ್ಲಿ ಈ ಪರಿಸ್ಥಿತಿ ಇದ್ದು, ಶುದ್ಧ ನೀರು ಇಲ್ಲವೇ ಇಲ್ಲ. ಶುದ್ಧ ನೀರಿನ ಘಟಕಗಳು ಬಂದ್ ಆಗಿವೆ. ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಸ್ಥಳೀಯ ಪಂಚಾಯಿತಿಗಳು ಹೋಗಿಲ್ಲ. ಕುಡಿಯುವ ನೀರು ಮತ್ತು ಮೂಲಸೌಕರ್ಯ ಇಲಾಖೆ ಜಿಲ್ಲಾಡಳಿತಕ್ಕೆ ಅಂಕಿ-ಅಂಶ ನೀಡಿ ಕೈತೊಳೆದುಕೊಂಡಿದೆ. ಆದರೆ ಗ್ರಾಮೀಣ ಭಾಗದ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ.

ಕುಡಿಯುವ ನೀರಿನ ಸಮಸ್ಯೆಗೆ ಕಾರಣ:

ಸುತ್ತಮುತ್ತಲಿನ ಜಲಮೂಲಗಳು ಬೇಸಿಗೆಯಲ್ಲಿ ಬತ್ತುವುದರಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಕೊಳವೆಬಾವಿಗಳು ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿವೆ. ಹನಿ ನೀರಿಗೂ ಬರ. ಇದ್ದ ನೀರು ಪ್ಲೋರೈಡ್‌ಯುಕ್ತ ಅಂಶಗಳಿಂದ ಸೇವಿಸಲು ಅಷ್ಟೇ ಅಲ್ಲ ಸ್ನಾನ ಮಾಡಲು, ಬಟ್ಟೆತೊಳೆಯಲು ಕೂಡಾ ಯೋಗ್ಯವಲ್ಲ. ಇದರಿಂದ ಕಪ್ಪು ಮಣ್ಣಿನಲ್ಲಿ ನಿರ್ಮಿಸಿದ ಕೆರೆಗಳಲ್ಲಿ ನಿಂತ ನೀರನ್ನೇ ಕುಡಿಯಲು ಬಳಸಬೇಕಾದ ಅನಿರ್ವಾಯ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.

ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಕುಂಟುತ್ತಾ ಸಾಗಿವೆ. ತುಂಗಭದ್ರಾ ನದಿಯಿಂದ ಪೂರೈಸುವ ನೀರನ್ನು ಶುದ್ಧೀಕರಿಸದೇ ಬಿಡುತ್ತಿರುವುದರಿಂದ ನೀರು ಸೇವನೆಗೆ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ನಿಂತ ಕೆರೆಯ ನೀರನ್ನೇ ಬಳಸುತ್ತಿರುವುದರಿಂದ ಬೇಸಿಗೆಯಲ್ಲಿ ವಾಂತಿ, ಬೇಧಿ, ಜ್ವರ ಕಾಣಿಸಿಕೊಳ್ಳುವುದು ಪ್ರತಿವರ್ಷ ಸಾಮಾನ್ಯ ಸಮಸ್ಯೆಯಾಗಿದೆ.

ಗ್ರಾಮದಲ್ಲಿ ಇರುವ ಶುದ್ಧ, ಕುಡಿಯುವ ನೀರಿನ ಘಟಕಗಳು ನಿರ್ವಹಣೆ, ವಿದ್ಯುತ್ ಪೂರೈಕೆ ಸಮಸ್ಯೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಬಂದ್ ಆಗಿವೆ. ಅವುಗಳ ಉಪಯುಕ್ತತೆಯನ್ನು ಜನರಿಗೆ ಸ್ಥಳೀಯ ಆಡಳಿತ ಕೂಡಾ ತಿಳಿಸುವುದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.

ತೀವ್ರ ನೀರಿನ ಸಮಸ್ಯೆ: ಕುಷ್ಟಗಿ, ಯಲಬುರ್ಗಾ, ಕುಕನೂರ ತಾಲ್ಲೂಕು ಮತ್ತು ಹನುಮಸಾಗರ ಭಾಗದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಗ್ರಾಮಗಳೇ ಹೆಚ್ಚಿವೆ. ಖಾಸಗಿ ಕೊಳವೆ ಬಾವಿ, ಕೃಷಿ ಹೊಂಡದ ಮಾಲೀಕರಿಂದ ನೀರನ್ನು ಪಡೆದುಕೊಳ್ಳಲಾಗುತ್ತಿದೆ. ಮತ್ತೊಂದೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಕೆಲವೆಡೆ ಅನಿವಾರ್ಯವಾಗಿ ಸವಳು ನೀರನ್ನೇ ಬಳಸಬೇಕಾಗಿರುವುದು ಗ್ರಾಮಸ್ಥರಲ್ಲಿ ಅಸಹನೆ ಹೆಚ್ಚುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.