ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಅಂತರರಾಜ್ಯ ನೀರಾವರಿ ಯೋಜನೆಯಾದ ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿ ಮತ್ತು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನಿಗದಿತ ದಿನಾಂಕಕ್ಕಿಂತಲೂ ಎರಡು ದಿನ ಮೊದಲೇ ಸೋಮವಾರ ನೀರು ಹರಿಸಲಾಗಿದೆ.
ಜೂನ್ 27ರಂದು ಬೆಂಗಳೂರಿನಲ್ಲಿ ನಡೆದಿದ್ದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಿದಂತೆ ಜಲಾಶಯದಿಂದ ನದಿಗೆ 1,500 ಕ್ಯೂಸೆಕ್ಸ್, ಎಡದಂಡೆ ಮುಖ್ಯ ಕಾಲುವೆಗೆ 500 ಕ್ಯೂಸೆಕ್ಸ್ ಪ್ರಮಾಣದಲ್ಲಿ ಜುಲೈ 2ರಂದು ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ ಎರಡು ದಿನಗಳ ಮೊದಲೇ ನೀರು ಹರಿಸಿದ್ದು ರೈತರ ಖುಷಿಗೆ ಕಾರಣವಾಗಿದೆ.
ರಾಯಚೂರು ಭಾಗಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ, ಐಸಿಸಿ ಸಲಹಾ ಸಮಿತಿಯ ಅಧ್ಯಕ್ಷ ಶಿವರಾಜ ತಂಗಡಗಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸೂಚನೆ ಮೇರೆಗೆ ಮೊದಲೇ ನೀರು ಹರಿಸಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.
ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ನೀರು ಬಿಡುಗಡೆ ಮಾಡಲಾಯಿತು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮರೇಶಪ್ಪ, ಸಹಾಯಕ ಎಂಜಿನಿಯರ್ ಪ್ರಾಣೇಶ ಭಜಂತ್ರಿ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.