ಪ್ರಜಾವಾಣಿ ವಾರ್ತೆ
ಮುನಿರಾಬಾದ್: ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಮೂಲಕ ಹರಿಯುವ ನೀರು ಇನ್ನೂ ಕಾಲುವೆಯ ಕೊನೆಯ ಭಾಗದ ರೈತರ ಜಮೀನಿಗೆ ತಲುಪದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ತುಂಗಭದ್ರಾ ಜಲಾಶಯ ಭರ್ತಿಯಾಗಿ ಒಂದು ತಿಂಗಳಿನಿಂದ ವ್ಯರ್ಥವಾಗಿ ನದಿಯಲ್ಲಿ ನೀರು ಹರಿದು ಸಮುದ್ರ ಸೇರುತ್ತಿದೆ. ಆದರೆ ಜಲಾಶಯದ 6-8 ಕಿಲೋಮಿಟರ್ ಅಂತರದಲ್ಲಿರುವ ರೈತರ ಜಮೀನುಗಳಿಗೆ ಇನ್ನೂ ನೀರು ದಕ್ಕುತ್ತಿಲ್ಲ. ಇದು ಅಧಿಕಾರಿಗಳ ಹೊಣೆಗೇಡಿತನ’ ಎಂದು ಬೇವಿನಹಳ್ಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಬೇವಿನಹಳ್ಳಿ ಗ್ರಾಮದ ರೈತ ಸಂಘದ ಮುಖಂಡರಾದ ಹನುಮಂತಪ್ಪ ಮಾಸ್ತರ, ಯಮನೂರಪ್ಪ ಮಡ್ಡಿ, ಪದ್ಯಪ್ಪ ಮಡ್ಡಿ, ನಿಂಗಪ್ಪ ಬಟಿಗೇರಿ, ಹೊನ್ನಪ್ಪ ಕುರಿ, ನಾಗಪ್ಪ ಕುರಿ ಇತರರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಕಾಲುವೆಗೆ ನೀರು ಬಿಡುವ ಸಂದರ್ಭದಲ್ಲೇ ದುರಸ್ತಿಯ ನೆಪ ಹೇಳುವ ಅಧಿಕಾರಿಗಳು ಕಾಲುವೆಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ದುರಸ್ತಿ ಮಾಡದೆ ಬೇಜವಾಬ್ದಾರಿಯನ್ನು ತೋರುತ್ತಾರೆ. ಭತ್ತಕ್ಕೆ ಜಮೀನನ್ನು ಸಿದ್ಧಪಡಿಸಿಟ್ಟುಕೊಂಡು ನೀರಿಲ್ಲದೆ ಪರದಾಡುವಂತಾಗಿದೆ. ಕೆಲವು ರೈತರು ಹಳ್ಳದಿಂದ ನೀರನ್ನು ಪಂಪ್ ಮಾಡುವ ಮೂಲಕ ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ನದಿಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಂಡರೆ ಹೊಟ್ಟೆ ಉರಿಯುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿ ಸ್ಪಷ್ಟನೆ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ ಅವರು ಪ್ರತಿಕ್ರಿಯಿಸಿ ‘ಕಾಲುವೆ ಆರಂಭದಲ್ಲಿನ ಭಾಗದ ರೈತರು ಹೆಚ್ಚು ನೀರನ್ನು ಬಳಸಿಕೊಳ್ಳುವ ಕಾರಣ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿರುವುದಿಲ್ಲ. ಕೆಲವು ಕಡೆ ಕಾಲುವೆ ದುರಸ್ತಿ ಕಾಮಗಾರಿ ಕೂಡ ನಡೆದಿತ್ತು’ ಎಂದು ಒಪ್ಪಿಕೊಂಡರು. ಇನ್ನು ಐದಾರು ದಿನಗಳಲ್ಲಿ ನೀರು ತಲುಪಬಹುದು ಎಂದು ‘ಪ್ರಜಾವಾಣಿ’ ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.