ADVERTISEMENT

ಕೊಪ್ಪಳ: ಶನಿವಾರದಿಂದ ಕಾಲುವೆಗೆ ನೀರು

ಐಸಿಸಿ ಸಭೆಯಿಲ್ಲದೆ ಸಚಿವ, ಸಂಸದರ ಒಪ್ಪಿಗೆ ಮೇರೆಗೆ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:28 IST
Last Updated 23 ಜುಲೈ 2020, 12:28 IST

ಕೊಪ್ಪಳ: ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ಜುಲೈ 25ರಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದುಐಸಿಸಿ ಕಮಿಟಿ ಅಧ್ಯಕ್ಷ, ಸಚಿವ ಲಕ್ಷ್ಮಣಸವದಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು,ಸದ್ಯ ಜಲಾಶಯದಲ್ಲಿ 32.46 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, 31,498 ಕ್ಯೂಸೆಕ್ ಒಳಹರಿವಿದೆ. ಹೀಗಾಗಿ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗುವುದು. ಎಡದಂಡೆ ಭಾಗದ ಕೊನೆ ಭಾಗಕ್ಕೆ ನೀರು ಹರಿಸುವ ಉದ್ದೇಶದಿಂದ ಆನ್/ಆಫ್ ಪದ್ಧತಿಯಡಿ ನೀರು ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಇರುವ ಕಾರಣ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿಲ್ಲ. ಆದರೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರ ಅನುಕೂಲಕ್ಕಾಗಿ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಎಡದಂಡೆ ಮುಖ್ಯ ಕಾಲುವೆ ಹಾಗೂ ಮೇಲ್ಮಟ್ಟದ ಕಾಲುವೆಗೆ ಜುಲೈ 25ರಿಂದ ನ.30ವರೆಗೆ 4,100 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ 700 ಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1,280 ಕ್ಯೂಸೆಕ್, ರಾಯ, ಬಸವಣ್ಣ ಕಾಲುವೆಗೆ ನ.1ರಿಂದ ಡಿ.10ವರೆಗೆ 250 ಕ್ಯೂಸೆಕ್, ನದಿಗೆ ಜು.25ರಿಂದ ನ.30ವರೆಗೆ 60 ಕ್ಯೂಸೆಕ್, ಏತ ನೀರಾವರಿ ಯೋಜನೆಗಳಿಗೆ ಜು.25ರಿಂದ ನ.30ವರೆಗೆ 100 ಕ್ಯೂಸೆಕ್ ಹಾಗೂ ಕಾರ್ಖಾನೆಗಳಿಗೆ ಜು.25ರಿಂದ ನ.30ವರೆಗೆ 60 ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ಆನ್/ಆಫ್ ಪದ್ಧತಿಯಡಿ ನೀರು ನಿರ್ವಹಣೆ ಮಾಡಲಾಗುವುದು. ವಿತರಣಾ ಕಾಲುವೆ ಸಂಖ್ಯೆ 1ರಿಂದ 16,49,51,52,54,55,56 ರನ್ನು ಸೆ.1ರಿಂದ 4ವರೆಗೆ, ಅ.1ರಿಂದ 4ವರೆಗೆ, ನ.1ರಿಂದ 4ವರೆಗೆ ಹಾಗೂ ಡಿ.1ರಿಂದ 4ವರೆಗೆರ ಬೆಳಗ್ಗೆ 8ಗಂಟೆವರೆಗೆ ಬಂದ್ ಮಾಡಲಾಗವುದು.

ವಿತರಣಾ ಕಾಲುವೆ ಸಂಖ್ಯೆ 17ರಿಂದ 25, 36,37,38,40,41,42,44,45,46,48ನ್ನು ಸೆ.4ರಿಂದ 9ವರೆಗೆ, ಅ.4ರಿಂದ 9ವರೆಗೆ, ನ.4ರಿಂದ 9ವರೆಗೆ ಹಾಗೂ ಡಿ.4ರಿಂದ 9ವರೆಗೆ ಬಂದ್ ಮಾಡಲಾಗುವುದು.

ವಿತರಣಾ ಕಾಲುವೆ 27ರಿದ 34, 62,63,65,66,69,71ಎ, 73,74,78,79,81,82,84ನ್ನು ಸೆ.7ರಿಂದ 10ವರೆಗೆ, ಅ.7ರಿಂದ 10ವರೆಗೆ, ನ.7ರಿಂದ 10ವರೆಗೆ, ಡಿ.7ರಿಂದ 10ವರೆಗೆ ಬೆಳಿಗ್ಗೆ 8ಗಂಟೆವರೆಗೆ ಬಂದ್ ಮಾಡಲಾಗುವುದು. ವಿತರಣಾ ಕಾಲುವೆ 76,85,87,89,90,91,92ನ್ನು ಸೆ.10ರಿಂದ 13ವರೆಗೆ, ಅ.10ರಿಂದ 13ವರೆಗೆ, ನ.10ರಿಂದ 13ವರೆಗೆ, ಡಿ.10ರಿಂದ 13ವರೆಗೆ ಬಂದ್ ಆಗಲಿವೆ.

'ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ನೀರು ಪೋಲಾಗದಂತೆ ಹಾಗೂ ಅನಧಿಕೃತ ಬೆಳೆ ಉಲ್ಲಂಘನೆ ಮಾಡದೆ ನಿಗಧಿತ ಬೆಳೆಗಳನ್ನು ಮಾತ್ರ ಬೆಳೆಯಬೇಕು' ಎಂದು ಮುನಿರಾಬಾದ್ ನೀರಾವರಿ ಯೋಜನೆ ಅಧೀಕ್ಷಕಎಂಜಿನಿಯರ್ ಬಿ.ಆರ್ ರಾಠೋಡ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.