ADVERTISEMENT

ಕೊಪ್ಪಳ ವಿವಿ ಬಂದ್ ಮಾಡಲು ಬಿಡಲ್ಲ: ಜೆಡಿಎಸ್ ಜಿಲ್ಲಾ ವಕ್ತಾರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 13:49 IST
Last Updated 14 ಫೆಬ್ರುವರಿ 2025, 13:49 IST
ಮಲ್ಲನಗೌಡ ಕೋನನಗೌಡ್ರ 
ಮಲ್ಲನಗೌಡ ಕೋನನಗೌಡ್ರ    

ಯಲಬುರ್ಗಾ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಹಿಂದುಳಿದ ಪ್ರದೇಶದಲ್ಲಿ ಶೈಕ್ಷಣಿಕ ಸುಧಾರಣೆ ಹಾಗೂ ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ವಿವಿಧೆಡೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಆದರೆ ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವುಗಳನ್ನು ಬಂದ್ ಮಾಡಲು ಮುಂದಾಗಿದ್ದು, ದುರಾದೃಷ್ಟಕರ ಸಂಗತಿ’ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಶೈಕ್ಷಣಿಕವಾಗಿ ಹೆಚ್ಚಿನ ಅಭಿವೃದ್ಧಿ ಮೂಲಕ ಈ ಭಾಗವನ್ನು ಕಲ್ಯಾಣಗೊಳಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತು. ಆದರೆ ಸರ್ಕಾರ ಅದನ್ನು ಬಂದ್ ಮಾಡಿ, ಈ ಭಾಗದ ಹೆಣ್ಣುಮಕ್ಕಳ, ಬಡವರ, ರೈತರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರುವಂತೆ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರವನ್ನು ಹಿಂದಕ್ಕೆ ಪಡೆದು ಸ್ಥಾಪನೆಗೊಂಡ ವಿವಿಯನ್ನು ಅಭಿವೃದ್ಧಿಗೊಳಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗಬೇಕು. ಬಂದ್ ಮಾಡಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯೇ ವಿವಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದ ಮಾಜಿ ಸಂಸದ ಸಂಗಣ್ಣ ಕರಡಿಯವರು ಈಗ ಮೌನಮುರಿದು ವಿವಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಶೈಕ್ಷಣಿಕವಾಗಿ ಹಿಂದುಳಿದೆ ಎಂಬುದಕ್ಕೆ ಶುಭಾಶಯ ಎಂದು ಬರೆಯಲು ಬರದಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತ್ಯಕ್ಷ ಸಾಕ್ಷಿ ಎನ್ನಬಹುದಾಗಿದೆ. ಕೊಪ್ಪಳದ ಮಗ ಎಂದು ಹೇಳಿಕೊಳ್ಳುವ ತಂಗಡಗಿಯವರು ಜಿಲ್ಲೆಯಲ್ಲಿ ವಿವಿಯನ್ನು ಉಳಿಸಿಕೊಳ್ಳುವಲ್ಲಿ ತಮ್ಮ ನಿಷ್ಠೆ ತೋರುವ ಮೂಲಕ ಈ ಭಾಗದ ಯುವಜನರಿಗೆ ಆಶಾಕಿರಣ ಆಗಬೇಕಾಗಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಯವರು ಜಿಲ್ಲೆಯಲ್ಲಿ ವಿವಿ ಉಳಿಸಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಇಟ್ಟಿರುವ ಪ್ರೀತಿಯನ್ನು ತೋರ್ಪಡಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದಲೇ 371(ಜೆ) ಜಾರಿಯಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಭಾಗದ ಶೈಕ್ಷಣಿಕ ಪ್ರಗತಿಯು ಕಡಿಮೆಯಿದೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯ ತೀರಾ ಕಡಿಮೆ ಆಗಿರುವುದರಿಂದ ಕೊಪ್ಪಳ ವಿಶ್ವವಿದ್ಯಾಲಯವನ್ನು ಬಂದ್ ಮಾಡುವ ಬದಲು ವಿವಿಧ ಕೋರ್ಸ್‍ಗಳನ್ನು ಆರಂಭಿಸಿ ಅಭಿವೃದ್ಧಿಗೊಳಿಸಿ, ಸಂಶೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಾಗಿದೆ. ಅನಗತ್ಯವಾಗಿ ಹಣ ಪೋಲು ಮಾಡುವುದನ್ನು ಬಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಚಿಂತನೆ ಮಾಡಬೇಕಾದ ಸಿದ್ದರಾಮಯ್ಯನವರ ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಜೋತು ಬಿದ್ದಿದೆ. ಹಣದ ಕೊರತೆ ನೀಗಿಸುವ ಸಲುವಾಗಿ ಪ್ರಯಾಣದರ ಹೆಚ್ಚಳ ಮಾಡಿದ್ದು, ವಿದ್ಯುತ್ ದರ ಹೆಚ್ಚಿಸಲು ಮುಂದಾಗಿದ್ದಲ್ಲದೇ, ಈಗ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿವಿಗಳನ್ನು ಬಂದ್ ಮಾಡುವ ಮೂಲಕ ಯುವಜನರ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಅವಕಾಶವನ್ನು ಕಿತ್ತುಕೊಳ್ಳುತ್ತಿದೆ. ಕೂಡಲೇ ಬಂದ್ ಮಾಡುವ ನಿರ್ಧಾರವನ್ನು ಕೈ ಬಿಟ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಸಿಬ್ಬಂದಿ ನಿಯೋಜಿಸಿ ಮಾದರಿ ವಿವಿಗಳಾಗಿ ರೂಪಿಸಲು ಪ್ರಯತ್ನಿಸಬೇಕು. ಈ ಮನವಿಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.