ADVERTISEMENT

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಸ್ವಾಧೀನ: ಜಿಲ್ಲಾ ವಕೀಲರ ಸಂಘದಿಂದ ರಿಟ್‌

ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಸ್ವಾಧೀನ: ಅನುದಾನ ನೀಡದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 8:49 IST
Last Updated 18 ಮಾರ್ಚ್ 2023, 8:49 IST
ಎ.ವಿ. ಕಣವಿ
ಎ.ವಿ. ಕಣವಿ   

ಕೊಪ್ಪಳ: ‘ಕೊಪ್ಪಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಭೂ ಸ್ವಾಧೀನಕ್ಕೆ ಸರ್ಕಾರ ನೀಡಬೇಕಾದ ಅನುದಾನ ಬಾಕಿ ಉಳಿಸಿಕೊಂಡಿದ್ದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆ ರಾಯಚೂರಿನಿಂದ ಪ್ರತ್ಯೇಕವಾಗಿ ಎರಡೂವರೆ ದಶಕ ಕಳೆದರೂ ಸ್ವಂತ ನ್ಯಾಯಾಲಯ ಸಂಕೀರ್ಣವಿಲ್ಲ. ನಮ್ಮ ನೆರೆಹೊರೆಯ ಜಿಲ್ಲೆಗಳಲ್ಲಿ ನಮ್ಮಲ್ಲಿಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿರುವ ನ್ಯಾಯಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹಾಗೆಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನ್ಯಾಯಾಲಯ ಸಂಕೀರ್ಣದ 11 ಎಕರೆ 14 ಗುಂಟೆ ಭೂ ಸ್ವಾಧೀನಕ್ಕೆ ಸರ್ಕಾರ ಒಟ್ಟು ₹10.61 ಕೋಟಿ ನೀಡುವುದಾಗಿ ಹೇಳಿದ್ದು, ಇದರಲ್ಲಿ ₹1.80 ಕೋಟಿ ಮಾತ್ರ ನೀಡಿದೆ. ಉಳಿದ ಹಣ ನೀಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಇದರ ಬಗ್ಗೆ ಗಂಭೀರವಾಗಿ ತಲೆ ಕೆಡಿಸಿಕೊಂಡಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಸರ್ಕಾರ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿ ಮಾಡಿ ರಿಟ್‌ ಸಲ್ಲಿಸಲಾಗಿದೆ. ಮಾ. 21ಕ್ಕೆ ವಿಚಾರಣೆಗೆ ಬರಲಿದ್ದು, ಅಲ್ಲಿ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರೂ ಸರ್ಕಾರ ತನ್ನ ಜವಾಬ್ದಾರಿ ಮರೆತಂತೆ ವರ್ತಿಸುತ್ತಿದೆ. ಇಲ್ಲಿನ ನ್ಯಾಯಾಲಯದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಮೂಲ ಸೌಕರ್ಯಗಳೇ ಮರೀಚಿಕೆಯಾಗಿವೆ. ಬೆಳ್ಳಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದರೂ ಜಿಲ್ಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಭೂ ಸ್ವಾಧೀನಕ್ಕೆ ಸರ್ಕಾರ ಕೊಡಬೇಕಾದ ಬಾಕಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಲ್‌.ಎಸ್‌. ಹಿರೇಗೌಡ್ರು, ಉಪಾಧ್ಯಕ್ಷ ದಿವಾಕರ್‌ ಜಿ. ಬಾಗಲಕೋಟೆ, ಮಹಿಳಾ ಪ್ರತಿನಿಧಿ ಪುಷ್ಪಾ ಬೇವೂರು, ಸಂಘದ ಖಜಾಂಚಿ ಚಿದಾನಂದ ಪಾಟೀಲ, ರಾಜ್ಯ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.