
ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಮನೆಯಲ್ಲಿ ಉಪಾಹಾರ ಸೇವಿಸಿದ ಯದುವೀರ ಒಡೆಯರ್
ಕೊಪ್ಪಳ: ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದಲ್ಲಿ ಭಾನುವಾರ ಮತಯಾಚನೆ ಮಾಡಿದರು.
ಇದಕ್ಕೂ ಮೊದಲು ಒಡೆಯರ್ ಅವರು ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಮನೆಯಲ್ಲಿ ಉಪಾಹಾರ ಸೇವಿಸಿದರು.
ರಾಜವಂಶಸ್ಥರ ಸ್ವಾಗತಕ್ಕೆ 12ನೇ ವಾರ್ಡ್‌ನಲ್ಲಿರುವ ಮಂಜುನಾಥ ಅವರ ಓಣಿಯ ರಸ್ತೆಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಯದುವೀರ ಬರುತ್ತಿದ್ದಂತೆ ಸ್ಥಳೀಯರು ಆರತಿ ಮಾಡಿ ಸ್ವಾಗತಿಸಿ ಹೂ ಮಳೆಗರೆದು ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದರು.
ಬಳಿಕ ಮಂಜುನಾಥ ಮನೆಯಲ್ಲಿ ಇಡ್ಲಿ, ಸಿರಾ, ಮಂಡಾಳ ಒಗ್ಗರಣೆ, ತರಹೇವಾರಿ ಹಣ್ಣುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಡೆಯರ್ ಒಂದು ಇಡ್ಲಿ ಮಾತ್ರ ಸವಿದರು.
ಇದಕ್ಕೂ ಮೊದಲು ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ಬಾಮೀಜಿ ಆಶೀರ್ವಾದ ಪಡೆದರು. ಅಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಗವಿಮಠದ ಪರಂಪರೆಯ ಬಗ್ಗೆ ಸಾಕಷ್ಟು ಕೇಳಿದ್ದೇನೆ, ಇದು ಅತ್ಯಂತ ಪರಮ ಕ್ಷೇತ್ರ. ಎಲ್ಲರ ಒಳಿತಿಗಾಗಿ ಗವಿಮಠದ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಅಂಬೇಡ್ಕರ್ ಮೂರ್ತಿಗೂ ಮಾಲಾರ್ಪಣೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.