ಗಂಗಾವತಿ: ತಾಲ್ಲೂಕಿನ ದಾಸನಾಳ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಹೊಸ ಬೆಣಕಲ್ ಗ್ರಾಮದ ಪ್ರೀತಿ ವೀರಭದ್ರಪ್ಪ ಬಳಿಗಾರ ಎಂಬ ಯುವತಿಯ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಕೊಕ್ಕರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಯುವತಿ ಮನೆಗೆ ಮತ್ತು ಹೊಸಬೆಣಕಲ್ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ವೇಳೆಯಲ್ಲಿ ಒದಗಿಬಂದ ಮಾಹಿತಿ ಪ್ರಕಾರ ಮೃತ ಯುವತಿ ದೀರ್ಘಕಾಲದ ರೋಗದಿಂದ ಬಳಲುತ್ತಿದ್ದು, ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ. ಅವರ ಸಹೋದರ ಸಹ ಮಾನಸಿಕ ಅಸ್ವಸ್ಥತೆಯಿಂದ ಕೂಡಿರುತ್ತಾನೆ. ಇದೇ ಮನೆಯಲ್ಲಿ ವೃದ್ದೆಯಿದ್ದು, ಕುಟುಂಬವು ಬಡತನದಲ್ಲಿದ್ದು, ಬದುಕು ನಿರ್ವಹಣೆ ತುಂಬ ಕಷ್ಟವಾಗಿರುತ್ತದೆ. ಈ ಹಿನ್ನಲೆಯಲ್ಲಿ ಯುವತಿ ಮನನೊಂದು ಕಾಲುವೆಗೆ ಹಾರಿ ಮೃತಪಟ್ಟಿರುಬಹುದು ಎಂದು ಅಂದಾಜಿಸಿದ್ದಾರೆ.
ಕುಟುಂಬಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹2 ಲಕ್ಷ ಪರಿಹಾರ ನೀಡಲು ಅವಕಾಶವಿದ್ದು, ಅದನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಹಾಗೇ ಮೃತ ಯುವತಿಯ ತಂದೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ, ಮತ್ತೊಂದು ಹೆಣ್ಣುಮಗುವಿಗೆ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಒದಗಿಸುವ ಕುರಿತು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೊಸಬೆಣಕಲ್ ಗ್ರಾಮದ ನಿವಾಸಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.