ADVERTISEMENT

ಕುಷ್ಟಗಿ: ಪದವೀಧರರಿಗೆ ‘ಯುವನಿಧಿ’ ಯೋಜನೆ ನೆರವು

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:36 IST
Last Updated 21 ಮೇ 2025, 15:36 IST
ಕುಷ್ಟಗಿಯಲ್ಲಿ ಬುಧವಾರ ಯುವನಿಧಿ ಯೋಜನೆ ಜಾಗೃತಿ ಕಾರ್ಯಾಗಾರದಲ್ಲಿ ಪ್ರಮುಖರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕುಷ್ಟಗಿಯಲ್ಲಿ ಬುಧವಾರ ಯುವನಿಧಿ ಯೋಜನೆ ಜಾಗೃತಿ ಕಾರ್ಯಾಗಾರದಲ್ಲಿ ಪ್ರಮುಖರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು   

ಕುಷ್ಟಗಿ: ‘ಉದ್ಯೋಗಾಕಾಂಕ್ಷಿ ಪದವೀಧರರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಯನ್ನು ಅರ್ಹ ಪದವೀಧರರು ಸದುಪಯೋಗ ಪಡಿಸಿಕೊಳ್ಳಬೇಕಿದೆ’ ಎಂದು ಯೋಜನೆ ನೋಡಲ್‌ ಅಧಿಕಾರಿ ಶಿವಯೋಗಿ ಹೊಸಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಯುವನಿಧಿ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಪದವಿ ಪೂರ್ಣಗೊಳಿಸಿದವರು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದು ಸಿದ್ಧತೆ ಮಾಡಿಕೊಳ್ಳಲು ಯೋಜನೆಯಲ್ಲಿ ಎರಡು ವರ್ಷಗಳವರೆಗೆ ನೀಡುವ ಭತ್ಯೆ ಸಹಕಾರಿ ಆಗಲಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಹಾಕಿದರೆ, 180 ದಿನಗಳ ನಂತರ ಈ ಅನುದಾನ ಸಂಬಂಧಿಸಿದ ಅಭ್ಯರ್ಥಿಗಳ ಖಾತೆಗೆ ಜಮೆಯಾಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ನವೀಕರಣಗೊಳಿಸುವುದು ಅವಶ್ಯ’ ಎಂದು ಹೇಳಿದರು.

ಪ್ರಾಚಾರ್ಯ ಎಸ್.ವಿ. ಡಾಣಿ ಮಾತನಾಡಿ, ‘ಉದ್ಯೋಗ ಪಡೆಯಬೇಕಾದರೆ ಅದಕ್ಕೆ ಅಗತ್ಯ ಸಿದ್ಧತೆ, ಪ್ರಾಮಾಣಿಕ ಪ್ರಯತ್ನ ಅಗತ್ಯ. ಪದವೀಧರರು ತರಬೇತಿ ಪಡೆಯುವುದಕ್ಕೆ ಆರ್ಥಿಕ ನೆರವು ಕಲ್ಪಿಸಲು ಸರ್ಕಾರ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಪದವೀಧರರು ಭವಿಷ್ಯ ರೂಪಿಸಿಕೊಳ್ಳಲು ಯೋಜನೆ ಸಹಾಯವಾಗುತ್ತದೆ’ ಎಂದು ಹೇಳಿದರು.

ADVERTISEMENT

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಮರೇಶ, ಸದಸ್ಯೆ ಶಾರದಾ, ಶರಣು, ಅಶೋಕ ಕೆಂಚರಡ್ಡಿ, ಭೋಜರಾಜ ಇತರರು ಹಾಜರಿದ್ದರು. ಮಹಾಂತೇಶ ಗವಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.