ADVERTISEMENT

ಖಾಕಿ ಕಾವಲಿನಲ್ಲಿ ಸಂಚರಿಸಿದ ಬಸ್‍ಗಳು

ಖಾಸಗಿ ಬಸ್‍ಗಳಲ್ಲಿ ಹೆಚ್ಚಿನ ದರ ವಸೂಲಿ *ಬಸ್‍ಗಳಿಲ್ಲದೆ ಪ್ರಯಾಣಿಕರ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 20:18 IST
Last Updated 13 ಡಿಸೆಂಬರ್ 2020, 20:18 IST
ಪೊಲೀಸ್ ಭದ್ರತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟ ಬಿಎಂಟಿಸಿ ಬಸ್  ಪ್ರಜಾವಾಣಿ ಚಿತ್ರ - ಅನೂಪ್ ರಾಘ. ಟಿ.
ಪೊಲೀಸ್ ಭದ್ರತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟ ಬಿಎಂಟಿಸಿ ಬಸ್  ಪ್ರಜಾವಾಣಿ ಚಿತ್ರ - ಅನೂಪ್ ರಾಘ. ಟಿ.   
""

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿತು.ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯ ಕೆಲ ಬಸ್‌ಗಳು ಪೊಲೀಸ್ ಬೆಂಗಾವಲಿನಲ್ಲಿ ಓಡಾಟ ನಡೆಸಿದವು.

ಸರ್ಕಾರದ ಜೊತೆ ನೌಕರರ ಸಂಧಾನ ಯಶಸ್ವಿಯಾಗಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಸಂಜೆ ವೇಳೆ ಕೆಲ ಸಿಬ್ಬಂದಿ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣಗಳಿಂದ ಬಸ್ ಸಂಚಾರ ಆರಂಭಿಸಿದರು. ಕೆಲವು ಬಿಎಂಟಿಸಿ ಬಸ್‌ಗಳೂ ರಸ್ತೆಗಿಳಿದವು. ಆದರೆ, ಮುಷ್ಕರ ಸ್ಥಗಿತಗೊಳಿಸಿಲ್ಲ ಎಂದು ನೌಕರರ ಮುಖಂಡರು ಸ್ಪಷ್ಟಪಡಿಸಿದ ಬಳಿಕ ಬಸ್‌ ಸಂಚಾರ ರಾತ್ರಿ ಮತ್ತೆ ಸ್ಥಗಿತಗೊಂಡಿತು. ಮುಷ್ಕರ ಮುಗಿಯಿತು ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದ ಪ್ರಯಾಣಿಕರು ದಿಕ್ಕುತೋಚದ ಸ್ಥಿತಿಯನ್ನು ಎದುರಿಸಿದರು.

ಭಾನುವಾರ ರಜೆ ಇದ್ದ ಕಾರಣ ಜನರ ಓಡಾಟ ಕಡಿಮೆ ಇತ್ತು. ಗಾರ್ಮೆಂಟ್ಸ್, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ಕೆಲಸಗಳಿಗೆ ತೆರಳುವವರಿಗೆ ಮುಷ್ಕರದ ಬಿಸಿ ತಟ್ಟಿತು. ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೆ ಪಡಿಪಾಟಲು ಅನುಭವಿಸಿದರು.

ADVERTISEMENT

ಬಸ್‍ಗಳಿಗೆ ಪೊಲೀಸ್ ಕಾವಲು: ಮುಷ್ಕರದ ನಡುವೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಸಂಜೆ 5 ಗಂಟೆವರೆಗೆ ಒಟ್ಟು 93 ಬಿಎಂಟಿಸಿ ಬಸ್‍ಗಳು ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದವು. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ತಡೆಯಲು ಬಿಎಂಟಿಸಿ ಮತ್ತು ಪೊಲೀಸ್‌ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದವು. ಕೆಂಪೇಗೌಡ ಬಸ್ ನಿಲ್ದಾಣದಿಂದ ತೆರಳಿದ ಬಸ್‍ಗಳ ಮುಂದೆ ಹಾಗೂ ಹಿಂದೆ ಪೊಲೀಸ್ ಭದ್ರತಾ ವಾಹನಗಳು ರಕ್ಷಣೆ ನೀಡಿದವು.

ಈ ಹಿಂದಿನ ಭಾನುವಾರಕ್ಕೆ ಹೋಲಿಸಿದರೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬೆಂಗಳೂರು-ಮೈಸೂರು ನಡುವೆ ಕೆಎಸ್ಆರ್‌ಟಿಸಿ ಬಸ್‍ಗಳು ಸಂಚಾರ ನಡೆಸಿದವು. ಮಾರ್ಗಮಧ್ಯೆ ಇಳಿಯಬೇಕಿದ್ದ ಪ್ರಯಾಣಿಕರಿಗೂ ಮೈಸೂರುವರೆಗೆ ಟಿಕೆಟ್ ನೀಡುತ್ತಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರು -ಪ್ರಜಾವಾಣಿ ಚಿತ್ರ

ಆಟೊ ಚಾಲಕರ ವಿರುದ್ಧ 91 ಪ್ರಕರಣ
ಆಟೊ ಚಾಲಕರು ನಿಗದಿಗಿಂತ ಹೆಚ್ಚು ಬಾಡಿಗೆ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದರಿಂದ ಸಂಚಾರ ಪೂರ್ವ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿ ಆಟೊ ಚಾಲಕರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಸಾರ್ವಜನಿಕರು ಕರೆದಲ್ಲಿಗೆ ಬಾಡಿಗೆ ನಡೆಸಲು ಒಪದ್ದಕ್ಕೆ ಚಾಲಕರ ವಿರುದ್ಧ 29 ಪ್ರಕರಣ ಹಾಗೂ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುತ್ತಿದ್ದ ಚಾಲಕರ ವಿರುದ್ಧ 62 ಪ್ರಕರಣ ಸೇರಿ ಒಟ್ಟು 91 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಮೆಜೆಸ್ಟಿಕ್ ಸುತ್ತಮುತ್ತಲಿನ ಭಾಗಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೊಗಳನ್ನು ತಡೆದು ನಿಲ್ಲಿಸಿದ ಪೊಲೀಸರು ನಿಗದಿಗಿಂತ ಹೆಚ್ಚು ದರ ವಿಧಿಸಬಾರದು ಎಂದು ಎಚ್ಚರಿಸಿ ಕಳುಹಿಸಿದರು.

ಖಾಸಗಿ ಬಸ್‍ಗಳಲ್ಲಿ ದುಬಾರಿ ದರ
ಸಾರಿಗೆ ನಿಗಮಗಳ ನೌಕರರ ಮುಷ್ಕರ ಇದ್ದಿದ್ದರಿಂದ ಕೆಲ ಖಾಸಗಿ ಬಸ್‍ಗಳು ಸೇವೆ ಒದಗಿಸಿದವು. ಆದರೆ ಅವರು ಪ್ರಯಾಣಿಕರಿಂದ ಎಂದಿಗಿಂತ ಹೆಚ್ಚಿನ ಪ್ರಯಾಣದ ದರ ವಸೂಲಿ ಮಾಡುತ್ತಿದ್ದವು. ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್‍ವೊಂದರಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ಕೇಳುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಗದರಿಸಿ, ಸಾಮಾನ್ಯ ದರ ಪಡೆಯುವಂತೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.