ADVERTISEMENT

ಅಂಚೆ ಮೂಲಕ ಮತಕ್ಕೆ ಮನವಿ: ಸ್ಟ್ಯಾಂಪ್‌ ಕೊರತೆ

ಒಕ್ಕಲಿಗರ ಸಂಘದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:59 IST
Last Updated 24 ಡಿಸೆಂಬರ್ 2013, 6:59 IST

ಮಂಡ್ಯ: ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿರುವ ಕಾರಣದಿಂದಾಗಿ ಅಂಚೆ ಕಚೇರಿಯಲ್ಲಿ ಸ್ಟ್ಯಾಂಪ್‌ಗಳ ಮಾರಾಟ ಜೋರಾಗಿದೆ. ಪರಿಣಾಮ 25 ಪೈಸೆಯ ಅಂಚೆ ಚೀಟಿಗಳ ಕೊರತೆ ಎದುರಾಗಿದೆ.

ಸಂಘದ ಚುನಾವಣೆಯಲ್ಲಿ 37 ಸಾವಿರ ಮತದಾರರಿದ್ದಾರೆ. ಅವರು ಜಿಲ್ಲೆಯಾದ್ಯಂತ ಚದುರಿ ಹೋಗಿದ್ದಾರೆ. ಅವರನ್ನು ಮನೆ, ಮನೆಗಳಿಗೆ ತೆರಳಿ ಭೇಟಿ ಮಾಡುವುದು ಕಷ್ಟ. ಆದ್ದರಿಂದ ಪೋಸ್ಟ್‌ ಮೂಲಕ ಮತಕ್ಕೆ ಮನವಿ ಮಾಡುತ್ತಿರುವುದರ ಪರಿಣಾಮ ಅಂಚೆ ಚೀಟಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ವಿವಿಧ ಸ್ಥಳೀಯ ದಿನ ಪತ್ರಿಕೆಗಳನ್ನೂ ಪೋಸ್ಟ್‌ ಮೂಲಕ ಕಳುಹಿಸಲಾಗುತ್ತಿದ್ದು, ಪ್ರತಿ ಪೇಪರಿಗೂ 25 ಪೈಸೆ ಸ್ಟ್ಯಾಂಪ್‌ ಹಚ್ಚಿ, 37 ಸಾವಿರ ಮತದಾರರಿಗೆ ಕಳುಹಿಸಬೇಕು. ಒಂದು ಪತ್ರಿಕೆಗೆ 9 ಸಾವಿರ ರೂಪಾಯಿ ಸ್ಟಾಂಪ್‌್ ಬೇಕಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಸ್ಟಾಂಪ್‌ಗಳು ಲಭ್ಯವಿಲ್ಲ.

ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ ಪತ್ರಿಕೆಯವರೇ ಸ್ಟ್ಯಾಂಪ್‌ಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಪ್ರತಿ ಪೇಪರ್‌ಗೆ ಪೋಸ್ಟಲ್‌ ಹ್ಯಾಂಡಲಿಂಗ್‌ ಚಾರ್ಜ್‌ ಎಂದು 10 ಪೈಸೆಯನ್ನು ಅಂಚೆ ಇಲಾಖೆಗೆ ಕಟ್ಟಬೇಕು. ಆ ಮೂಲಕವೂ ಅಂಚೆ ಇಲಾಖೆಗೆ ಆದಾಯ ಹೆಚ್ಚಾಗಿದೆ.

ಕೆಲವರು ಕಾರ್ಡ್‌ ಮೂಲಕ ಮತ ಕೋರಿದ್ದರೆ, ಇನ್ನು ಕೆಲವರು ಇನ್‌ಲ್ಯಾಂಡ್‌ ಪತ್ರಗಳ ಮೂಲಕ ಮತ ಕೋರುತ್ತಿದ್ದಾರೆ. ಮತ್ತೆ ಕೆಲವರು ಕರಪತ್ರಗಳನ್ನು ಮುದ್ರಿಸಿ, ಅವುಗಳನ್ನು ತೆರೆದ ಅಂಚೆಯ ಮೂಲಕ ಕಳುಹಿಸುತ್ತಿದ್ದಾರೆ.

ತೆರೆದ ಅಂಚೆಯ ಪತ್ರಿ ಪತ್ರಕ್ಕೂ ನಾಲ್ಕು ರೂಪಾಯಿ ಸ್ಟ್ಯಾಂಪ್‌  ಲಗತ್ತಿಸಬೇಕಾಗಿರುವು ದರಿಂದ, ಮನವಿ ಕಳುಹಿಸುವುದಕ್ಕಾಗಿಯೇ ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆ ಮೂಲಕ ಮತದಾರರನ್ನು ತಲುಪಲು ಯತ್ನಿಸುತ್ತಿದ್ದಾರೆ.

ಕಣದಲ್ಲಿರುವ 24 ಅಭ್ಯರ್ಥಿಗಳ ಪೈಕಿ ಬಹಳಷ್ಟು ಮಂದಿ ಪತ್ರದ ಮೂಲಕ ಮನವಿ ಮಾಡುತ್ತಿರು­ವುದರಿಂದ ಪೋಸ್ಟ್‌ಗಳ ವಿಲೇವಾರಿ ಕೆಲಸವೂ ಹೆಚ್ಚಾಗಿದೆ. ಹೀಗಾಗಿ ಪೋಸ್ಟ್‌ಮನ್‌­ಗಳಿಗೂ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿ­ಕೊಂಡಿದ್ದಾರೆ.

ಮತದಾರ ಪಟ್ಟಿಯಲ್ಲಿರುವ ವಿಳಾಸವನ್ನೇ ನಂಬಿ ಪೋಸ್ಟ್‌ ಮಾಡಲಾಗುತ್ತಿದೆ. ಕೆಲವರ ವಿಳಾಸ ಬದಲಾಗಿರುವುದರಿಂದ ಅವರಿಗೆ ಪತ್ರಗಳನ್ನು ತಲುಪಿಸಲು ಪೋಸ್ಟ್‌ಮನ್‌ಗಳು ಹರಸಾಹಸ ಪಡಬೇಕಾಗಿದೆ. ಕಳೆದ ಒಂದು ವಾರದಿಂದ 25 ಪೈಸೆಯ ಸ್ಟ್ಯಾಂಪ್‌ಗಳು ಲಭ್ಯವಾಗುತ್ತಿಲ್ಲ. ಈಗಾಗಲೇ ನಾಲ್ಕಾರು ಪತ್ರಿಕೆಯವರು ಖರೀದಿ ಮಾಡಿರುವುದರಿಂದ ಕೊರತೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾಂಪ್‌ ಕಳುಹಿಸಲು ಕೋರಲಾಗಿದೆ ಎನ್ನುತ್ತಾರೆ ಪೋಸ್ಟ್‌ ಇಲಾಖೆಯ ಅಧಿಕಾರಿಗಳು.

ಈಗಾಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಟ್ಯಾಂಪ್‌ಗಳು ಮಾರಾಟವಾಗಿವೆ. ಸಗಟು ಪೋಸ್ಟ್‌ ಕಳುಹಿಸುವುದಕ್ಕಾಗಿ ಅನುಮತಿ ಕೋರಿ ಕೆಲವರು ಅರ್ಜಿಯನ್ನೂ ಸಲ್ಲಿಸಿದ್ದಾರೆ ಎನ್ನುವುದು ಅಧಿಕಾರಿಗಳ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.