ADVERTISEMENT

ಅಕ್ರಮ ಮದ್ಯ ಮಾರಾಟ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 8:50 IST
Last Updated 16 ಮಾರ್ಚ್ 2012, 8:50 IST

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಪ್ರಮಾಣ ಹೆಚ್ಚಾಗಿದ್ದು, ಗ್ರಾಮೀಣ ಭಾಗದಲ್ಲಿ ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಗುರುವಾರ ಮಂಡ್ಯದಲ್ಲಿ ಪ್ರತಿಭಟನಾ ಜಾಥಾ, ಧರಣಿ ನಡೆಸಿದರು.

ಮಹಿಳಾ ಮುನ್ನಡೆ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಅಬಕಾರಿ ಇಲಾಖೆ ಕಚೇರಿ ಬಳಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಅನಧಿಕೃತ ಮದ್ಯ ಮಾರಾಟ ವ್ಯಾಪಕವಾಗಿದೆ. ಕಳಪೆ ಗುಣಮಟ್ಟದ ಮದ್ಯ ಮಾರಾಟ ಆಗುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ ಎಂದು ದೂರಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತೆಯರು, ಸದಸ್ಯರು ಇಲಾಖೆಯ ಅಧಿಕಾರಿಗಳ ವೈಫಲ್ಯದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನೂ ಕೂಗಿದರು. ವಿವಿಧ ಭಿತ್ತಿಪತ್ರಗಳನ್ನು ಹಿಡಿದಿದ್ದು, ಆದಷ್ಟು ತ್ವರಿತಗತಿಯಲ್ಲಿ ಇಂಥ ಅಕ್ರಮ ಮಾರಾಟದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಬೇಡಿಕೆಗಳು: ಅನಧಿಕೃತ ಮದ್ಯದಂಗಡಿಗಳನ್ನು ಮುಚ್ಚಿಸಬೇಕು, ಇದನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು, ಜಿಲ್ಲೆಗಳಿಗೆ ನಿಗದಿತ ಮದ್ಯ ಮಾರಾಟದ ಗುರಿ ನಿಗದಿಸುವುದನ್ನು ಕೈಬಿಡಬೇಕು, ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಬೇಡಿಕೆಗಳಿರುವ ಮನವಿಯನ್ನು ನೀಡಿದರು.

ಮಹಿಳಾ ಮುನ್ನಡೆ ಸಂಘಟನೆ ನೇತೃತ್ವದ ಪ್ರತಿಭಟನೆಯಲ್ಲಿ ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ, ಸ್ಪಂದನಾ ಸಂಘಟನೆಯ ನಾಗರೇವಕ್ಕ, ಕರ್ನಾಟಕ ಜನಶಕ್ತಿ ಸಂಘಟನೆಯ ಡಾ. ವಾಸು, ಮಹಿಳಾ ಮುನ್ನಡೆ ಸಂಘಟನೆಯ ಮಲ್ಲಿಗೆ, ವಿಶ್ವನಾಥ್, ಸ್ಲಂ ನಿವಾಸಿಗಳ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.