ADVERTISEMENT

ಅಗ್ನಿ ಶ್ರೀಧರ್‌ ವಿರುದ್ಧ ಸೈಬರ್‌ ಠಾಣೆ ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 5:43 IST
Last Updated 27 ಡಿಸೆಂಬರ್ 2017, 5:43 IST

ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ ಭಾರತಮಾತೆಗೆ ಅವಮಾನವಾಗುವ ಆಡಿಯೊ, ವಿಡಿಯೊ, ಕವನ ಪೋಸ್ಟ್‌ ಮಾಡಿರುವ ಪತ್ರಕರ್ತ ಅಗ್ನಿಶ್ರೀಧರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆ ಜಾಲತಾಣಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಸೋಮವಾರ ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್‌, ಶಿವಕುಮಾರ್‌ ಆರಾಧ್ಯ, ಎಂ.ಸಿ.ವರದರಾಜು ಆನ್‌ಲೈನ್‌ನಲ್ಲೇ ದೂರು ಸಲ್ಲಿಸಿದ್ದಾರೆ. ಅಗ್ನಿ ಶ್ರೀಧರ್‌ ಅಡ್ಮಿನ್‌ ಆಗಿರುವ ‘ಅಗ್ನಿ ಅಸ್ತ್ರ ಡಾಟ್‌ ಕಾಮ್‌’ ತಾಣದಲ್ಲಿ ಕವನವೊಂದನ್ನು ಪೋಸ್ಟ್‌ ಮಾಡಲಾಗಿದೆ.

ಅದರಲ್ಲಿ ಭಾರತ ಮಾತೆಯನ್ನು ವ್ಯಭಿಚಾರಿಗೆ ಹೋಲಿಕೆ ಮಾಡಲಾಗಿದೆ. ಅಲ್ಲದೆ ಅಗ್ನಿ ಶ್ರೀಧರ್‌ ತಮ್ಮ ಯು ಟ್ಯೂಬ್‌ ಚಾನೆಲ್‌ನಲ್ಲಿ ವಿವಾದಾತ್ಮಕ ಆಡಿಯೊ, ವಿಡಿಯೊ ತುಣುಕುಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಕೂಡಲೇ ಅಗ್ನಿ ಅಸ್ತ್ರ ಡಾಟ್‌ ಕಾಮಗ್‌ ಹಾಗೂ ಯು ಟ್ಯೂಬ್‌ ತಾಣವನ್ನು ನಿಷೇಧಿಸಿ ಅಗ್ನಿಶ್ರೀಧರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

‘ಅಗ್ನಿ ಅಸ್ತ್ರ ಡಾಟ್‌ ಕಾಮ್‌ ವೈಬ್‌ಸೈಟ್‌ನಲ್ಲಿ ಯತಿರಾಜ್‌ ಬ್ಯಾಲಹಳ್ಳಿ ಎನ್ನುವವರು ಕವನ ಬರೆದಿದ್ದಾರೆ. ಅಡ್ಮಿನ್‌ ಹಾಗೂ ಕವನ ಬರೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದೇವೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.