ADVERTISEMENT

ಅಧಿಕಾರಿಗಳು, ಪೊಲೀಸರ ಮಧ್ಯಪ್ರವೇಶ: ತಪ್ಪಿದ ಬಾಲ್ಯವಿವಾಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 10:00 IST
Last Updated 10 ಜೂನ್ 2011, 10:00 IST

ಪಾಂಡವಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ  ಸಕಾಲಿಕ ಮಧ್ಯಪ್ರವೇಶದಿಂದಾಗಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಲ್ಯವಿವಾಹವೊಂದು ತಪ್ಪಿದ ಪ್ರಸಂಗ ಗುರುವಾರ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ನಡೆದಿದೆ.

ಪುಷ್ಪ (13) ಎಂಬ ಬಾಲಕಿಯೇ ಬಾಲ್ಯವಿವಾಹದಿಂದ ವಿಮುಕ್ತಿ ಪಡೆದವಳಾಗಿದ್ದಾಳೆ. ಬೆಂಗಳೂರಿನ ನಾಗರಬಾವಿಯ ಪುಟ್ಟಶೆಟ್ಟಿ-ಗೌರಮ್ಮ ಎಂಬ ದಂಪತಿಗಳ ಪುತ್ರಿ ಪುಷ್ಪ 7ನೇ ತರಗತಿಯಲ್ಲಿ ತೇರ್ಗಡೆಗೊಂಡು 8ನೇ ತರಗತಿಗೆ ಸರ್ಕಾರಿ ಪ್ರೌಢಶಾಲೆಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಳು.

  ಈಕೆಯ ಪೋಷಕರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನ ಹಳ್ಳಿಯ ಸರಸ್ವತಮ್ಮ ಅವರ ಪುತ್ರ ಮಂಜುನಾಥ (27) ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆ ಪ್ರಕಾರ ಲಗ್ನಪತ್ರಿಕೆ ಸಿದ್ದಪಡಿಸಿ ನೆಂಟರಿಷ್ಟರಿಗೆಲ್ಲ ಹಂಚಲಾಗಿತ್ತು. ಪುಷ್ಪಳ ಮಾವನ ಊರಾದ ಬನ್ನಂಗಾಡಿ ಗ್ರಾಮದಲ್ಲಿ  ಗುರುವಾರ ಮದುವೆ ಗೊತ್ತುಪಡಿಸಲಾಗಿತ್ತು. ಬಾಲಕಿ ಪುಷ್ಪಳಿಗೆ ಮಂಜುನಾಥ ಇನ್ನೇನೋ ತಾಳಿಕಟ್ಟಬೇಕೆನ್ನುವಷ್ಟರಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಪೋಲಿಸರೊಂದಿಗೆ ಆಗಮಿಸಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಿ. ವಿಮಲಾ ಅವರು ಬಾಲ್ಯ ವಿವಾಹ ತಡೆದರು.

`ನಮಗೆ ಬಡತನ ಇದ್ದುದ್ದರಿಂದ ತಮ್ಮ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಾಗಲಿಲ್ಲ. ಅದ್ದರಿಂದ ಮದುವೆ ಮಾಡಲು ನಿರ್ಧಾರ ಮಾಡಿದ್ದೆವು.  ಈಗ ನಮ್ಮ ತಪ್ಪಿನ ಅರಿವಾಗಿದೆ ` ಎಂದು ಪುಷ್ಪಳ ಪೋಷಕರು ಅಧಿಕಾರಿಗಳಿಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆ. 

 ಈ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ಎ.ವಿ. ಮ್ಯಾಥ್ಯೂ ಮತ್ತು ಕೆ.ಆರ್.ಎಸ್. ಪೋಲೀಸ್ ಠಾಣೆಯ ಎಎಸ್‌ಐ. ಶಿವನಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.