ADVERTISEMENT

ಅಪರಾಧ ತಡೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 8:24 IST
Last Updated 30 ಅಕ್ಟೋಬರ್ 2017, 8:24 IST

ಮದ್ದೂರು: ‘ಅಪರಾಧ ಹಾಗೂ ಅನೈತಿಕ ಚಟುವಟಿಕೆಗಳ  ನಿಯಂತ್ರಣಕ್ಕಾಗಿ ರಾಜ್ಯದ ಎಲ್ಲ ಪ್ರಮುಖ ಸಾರಿಗೆ ಬಸ್‌ನಿಲ್ದಾಣಗಳಲ್ಲಿ ಸಿ.ಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಭಾನುವಾರ ದಿಢೀರ್‌ ಭೇಟಿ ನೀಡಿದ ಅವರು, ನಿಲ್ದಾಣದ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿ ಸುದ್ದಿಗಾರರೊಡನೆ ಮಾತನಾಡಿದರು.
‘ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲ ಸಾರಿಗೆ ಬಸ್‌ನಿಲ್ದಾಣಗಳಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ.

ರಾಜ್ಯದ 20 ಜಿಲ್ಲೆಗಳ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದೇನೆ. ಆದ್ಯತೆ ಮೇರೆಗೆ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ 365 ಮಾರ್ಗಗಳಲ್ಲಿ 490 ಬಸ್‌ಗಳು ಸಂಚರಿಸುತ್ತಿವೆ. ಆದರೆ, 13 ಹಳ್ಳಿಗಳಿಗೆ ಬಸ್ ಸಂಚಾರ ಇಂದಿಗೂ ಇಲ್ಲ. ಕಾರಣ ಅಲ್ಲಿ ರಸ್ತೆಗಳು ಸರಿಯಾಗಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ಸರಿಪಡಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

‘ತಾಲ್ಲೂಕಿನ ಕೊಪ್ಪದಲ್ಲಿ ಸಾರಿಗೆ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್ ಅಂತ್ಯದ ವೇಳೆಗೆ ಪ್ರಯಾಣಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ. ಬೆಸಗರಹಳ್ಳಿ ಬಸ್ ನಿಲ್ದಾಣದ ನಿವೇಶನ ವಿವಾದ ಬಗೆಹರಿದಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ’ ಎಂದರು.

ಹಣ ವಸೂಲಿ ಮಾಡಬೇಡಿ: ದೂರದರ್ಶನದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಟ್ಟಣದ ಸಾಯಿ ಉಪಹಾರ್‌ ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ₹ 10 ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರು ಹೇಳಿದ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಶೌಚಾಲಯಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಶೌಚಾಲಯದಲ್ಲಿನ ಅಶುಚಿತ್ವ ಕಂಡು ಅಸಮಾಧಾನಗೊಂಡ ಸಚಿವರು, ಯಾವುದೇ ಕಾರಣಕ್ಕೂ ಮೂತ್ರ ವಿಸರ್ಜನೆಗೆ ಹಣ ವಸೂಲಿ ಮಾಡಬಾರದು ಎಂದು ಅಧಿಕಾರಗಳಿಗೆ ಎಚ್ಚರಿಕೆ ನೀಡಿದರು.

ಅಧಿಕಾರಿಗಳು ತರಾಟೆಗೆ: ಬಳಿಕ ಮುಖ್ಯ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ನಿಲ್ದಾಣದ ಆವರಣದಲ್ಲಿದ್ದ ಕಸದರಾಶಿ ಹಾಗೂ ಅನೈರ್ಮಲ್ಯ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಕಸದರಾಶಿ ತೆರವುಗೊಳಿಸಿ ನೈರ್ಮಲ್ಯ ಕಾರ್ಯ ಕೈಗೊಳ್ಳುವಂತೆ ಅಧಿಕಾರಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ಮಹೇಶ್, ವಿಭಾಗೀಯ ಸಂಪರ್ಕಾಧಿಕಾರಿ ಮರಿಗೌಡ, ಉಪ ಮುಖ್ಯ ಕಲ್ಯಾಣಾಧಿಕಾರಿ ಪುಟ್ಟೇಗೌಡ, ಪಟ್ಟಣ ಘಟಕ ವ್ಯವಸ್ಥಾಪಕ ಮುತ್ತುರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.