ADVERTISEMENT

ಆತಂಕದಲ್ಲಿ ಗ್ರಾಮಸ್ಥರು

ಡೆಂಗೆಗೆ ತಾಲ್ಲೂಕಿನಲ್ಲಿ ಮೊದಲ ಬಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 12:21 IST
Last Updated 1 ಜೂನ್ 2013, 12:21 IST

ಮದ್ದೂರು: ತಾಲ್ಲೂಕಿನ ದೊಡ್ಡಂಕನಹಳ್ಳಿ ಗ್ರಾಮದಲ್ಲಿ ಡೆಂಗೆ ಜ್ವರದಿಂದ ಯುವತಿ ರೋಜಾ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಗ್ರಾಮದಲ್ಲಿ ಮೃತಪಟ್ಟ ಯುವತಿ ರೋಜಾ ಅವರ ಸಹೋದರಿ ಜಾಹ್ನವಿ ಸೇರಿದಂತೆ ಗ್ರಾಮದ ಪೂಜಾ, ಗೌರಿ, ಕರಿಯಯ್ಯ, ಮಿಥುನ್, ಪಲ್ಲವಿ ಸೇರಿದಂತೆ ಹಲವರಿಗೆ    ಜ್ವರ ಕಾಣಿಸಿಕೊಂಡಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ   ಸೇರಿಸಲಾಗಿದೆ.

ಇದೀಗ ರೋಜಾ ಅವರ ಸಾವಿನಿಂದಾಗಿ ಇಡೀ ಗ್ರಾಮದ ಜನರು ಭಯಭೀತರಾಗಿದ್ದು, ಕೆಲವರು ಗ್ರಾಮ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕೆಲದಿನಗಳ ಹಿಂದೆ ರಾಘವ ಎಂಬ ಯುವಕ ಡೆಂಗೆ ಜ್ವರ ಪೀಡಿತನಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹಿಂದಿರುಗಿದ್ದರು. ಆ ಸಂದರ್ಭದಲ್ಲಿಯೇ ಗ್ರಾಮದ ಜನರು ಗ್ರಾಮದಲ್ಲಿ ಸ್ವಚ್ಛತೆಯ  ಬಗೆಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡದ ಕಾರಣ ರೋಗ ಇನ್ನಷ್ಟು ಹರಡಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆರೋಗ್ಯಾಧಿಕಾರಿಗಳ ಭೇಟಿ: ಯುವತಿ ರೋಜಾ ಸಾವಿನ ಸುದ್ದಿ ಸ್ಥಳೀಯ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಜಿಲ್ಲಾ ಸಾಂಕ್ರಮಿಕ ರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಿರಂಜನ್, ಸ್ಥಳೀಯ ಕೆಸ್ತೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜವರೇಗೌಡ ಅವರುಗಳು ತಮ್ಮ ಸಿಬ್ಬಂದಿ ಜತೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೀಗ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು, ಗ್ರಾಮದಲ್ಲಿ ಯಾರಿಗೆ ಜ್ವರ ಕಂಡು ಬಂದರೆ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಅಲ್ಲದೇ ರೋಗ ನಿಯಂತ್ರಣದ ಬಗೆಗೆ ಜನರಲ್ಲಿ ಅಗತ್ಯ ತಿಳುವಳಿಕೆ ನೀಡಲು ಜಾಥಾ ಸೇರಿದಂತೆ ಇನ್ನಿತರ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವುದಾಗಿ ಡಾ.ಗಂಗಾಧರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ರವಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿಳಿಗೌಡ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿದ್ದು, ಅಗತ್ಯ ಸ್ವಚ್ಛತೆ ಕೈಗೊಳ್ಳುವ ಭರವಸೆ ನೀಡಿದ್ದು, ಜನರು ಯಾವುದೇ              ಆತಂಕಕ್ಕೆ ಒಳಗಾಗಬಾರದು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.