ADVERTISEMENT

ಆತ್ಮಾನಂದ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 6:50 IST
Last Updated 21 ಏಪ್ರಿಲ್ 2013, 6:50 IST

ಮಂಡ್ಯ:  ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಭುಗಿಲೆದ್ದಿರುವ ಭಿನ್ನಮತ ತಾರಕಕ್ಕೇರಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ರಾಜೀನಾಮೆ ನೀಡಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಅವರು, ಟಿಕೆಟ್ `ಕೈ' ತಪ್ಪಿದ್ದರಿಂದ ಬೇಸರಗೊಂಡಿದ್ದರು. ಈಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಭಿನ್ನಮತದ ಕಾವಿಗೆ ತುಪ್ಪ ಸುರಿದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರಿಗೆ ಏ. 17ರಂದೇ ರಾಜೀನಾಮೆ ಪತ್ರವನ್ನು ಕಳುಹಿಸಿರುವ ಅವರು, ಮಾಧ್ಯಮಗಳಿಗೆ ಶನಿವಾರ ರಾಜೀನಾಮೆ ಪತ್ರ ಬಿಡುಗಡೆ ಮಾಡಿದರು.

ಪತ್ರ ಸಾರಾಂಶ ಹೀಗಿದೆ: `ನನ್ನನ್ನು ಜಿಲ್ಲಾಧ್ಯಕ್ಷನಾಗಿ ಈವರೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ತಮಗೆ ಕೃತಜ್ಞತೆಗಳು. ರಾಜ್ಯ ವಿಧಾನಸಭೆಯ ಚುನಾವಣೆಗೆ ಸಂಬಂಧಪಟ್ಟಂತೆ, ಮಂಡ್ಯ ಜಿಲ್ಲೆಯಲ್ಲಿನ ಈಚೀನ ಬೆಳವಣಿಗೆಗಳು, ಪಕ್ಷದ ಅಧ್ಯಕ್ಷನಾದ ನನ್ನಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕರ ಚರ್ಚೆಗೂ ಗ್ರಾಸವಾಗಿದೆ' `ಪಕ್ಷದಲ್ಲಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಉದ್ಭವಿಸಿರುವ ಈ ಗೊಂದಲಮಯ ಪರಿಸ್ಥಿತಿಯಲ್ಲಿ, ಸಾರ್ವಜನಿಕರಿಗೆ ಈ ಬಗೆಗೆ ಉತ್ತರಿಸುವುದು ಕಠಿಣ ಹಾಗೂ ದುಸ್ತರವಾಗಿದೆ. ಈ ಸಂದಿಗ್ಧತೆಯಿಂದಾಗಿ ಪಕ್ಷದ ಜಿಲ್ಲಾಧ್ಯಕ್ಷನಾಗಿ ಮುಂದುವರೆ ಯಲು, ಪಕ್ಷದ ಹಿತದೃಷ್ಟಿಯಿಂದ ಸಾಧುವಲ್ಲ ಹಾಗೂ ಸಮಂಜಸವೂ ಅಲ್ಲವೆಂದು ನನ್ನ ಭಾವನೆ. ಆದ್ದರಿಂದ ನೈತಿಕತೆಯ ಹಿನ್ನೆಲೆಯಲ್ಲಿ, ರಾಜೀನಾಮೆಯನ್ನು ನೀಡುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ. ನನ್ನ ಅನನ್ಯ ವಂದನೆಗಳು' ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.